ಕುಶಾಲನಗರ, ಫೆ 27: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು ಹಾಗೂ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ ವತಿಯಿಂದ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಮಾನವಿಕ ಸಭಾಂಗಣದಲ್ಲಿ ಮಾತೃಭಾಷಾ ದಿವಸ ಕಾರ್ಯಕ್ರಮ ನಡೆಯಿತು.

ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಪೆÇ್ರ. ಕೆ.ಎಸ್. ಚಂದ್ರಶೇಖರಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಹ ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರವೇ ಪ್ರತಿಯೊಂದು ಮಾತೃಭಾಷೆ ಬೆಳೆಯಲು ಸಾಧ್ಯ. ಇದರ ಜೊತೆಗೆ ವ್ಯವಹಾರಿಕ ಭಾಷೆಗಳಾಗಿರುವ ಇಂಗ್ಲಿಷ್, ಹಿಂದಿ ಹಾಗೂ ಇನ್ನಿತರ ಭಾಷೆಗಳನ್ನು ಕಲಿತು ಬಳಸಬೇಕು ಎಂದರು. ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಚಂದ್ರಶೇಖರ ಗಜಾನನ ಜೋಶಿ ಮಾತನಾಡಿ, ಕನ್ನಡ ನಾಡು-ನುಡಿ ಹಾಗೂ ಕನ್ನಡ ಕವಿಗಳ ಕುರಿತು ಪರಿಚಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕಿ ಪೆÇ್ರ. ಮಂಜುಳಾ ಶಾಂತಾರಾಮ್ ಮಾತನಾಡಿ, ನಮ್ಮ ಭಾವನೆ ಹಾಗೂ ವಿಚಾರಗಳನ್ನು ಮನದಟ್ಟು ಮಾಡಲು ಸಂವಹನ ಭಾಷೆಯ ತಿಳುವಳಿಕೆ ಅಗತ್ಯವಾಗಿದೆ. ಬಾಲ್ಯದಲ್ಲಿ ಪ್ರಥಮವಾಗಿ ಕಲಿಯುವ ಮಾತೃಭಾಷೆಯ ಜೊತೆಗೆ ಸ್ಥಳೀಯವಾಗಿ ಬಳಕೆಯಲ್ಲಿರುವ ಭಾಷೆಗಳನ್ನು ಸಹ ನಾವು ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಸೂಕ್ಮಾಣುಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಐ.ಕೆ. ಮಂಜುಳಾ, ಯೋಗಿಕ್ ಸೈನ್ಸ್‍ನ ಸಂಯೋಜಕ ಡಾ. ಜೆ. ಶ್ಯಾಮಾ ಸುಂದರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿರುಚಿತ್ರ ಪ್ರದರ್ಶನ, ಗ್ರಂಥಾಲಯದ ಪುಸ್ತಕ ಪ್ರದರ್ಶನ ಹಾಗೂ ರಸಪ್ರಶ್ನೆ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ರಸಪ್ರಶ್ನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೇಷ್ಮ ನಿರೂಪಿಸಿದರು, ಗ್ರೀಷ್ಮಾ ಮತ್ತು ತಂಡ ಪ್ರಾರ್ಥಿಸಿತು, ರಾಜೇಶ್ ಸ್ವಾಗತಿಸಿದರು, ಗಾನಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವೃಂದ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.