ಹಾಕಿ ಭಾರತದ ರಾಷ್ಟ್ರೀಯ ಆಟ. ಭಾರತ ಅನೇಕ ಒಲಿಂಪಿಕ್ಸ್‍ಗಳಲ್ಲಿ ಚಿನ್ನದ ಪದಕ ಪಡೆದು ಹಾಕಿ ಜಗತ್ತಿನಲ್ಲಿ ಸಾರ್ವಭೌಮ ಎನ್ನಿಸಿಕೊಂಡಿತ್ತು. 1928ರಿಂದ ಸತತವಾಗಿ 6 ಒಲಿಂಪಿಕ್ಸ್‍ಗಳಲ್ಲಿ ಭಾರತ ಚಿನ್ನದ ಪದಕವನ್ನು ಪಡೆದಿತ್ತು. ಈ ಆಟಕ್ಕೆ 4000 ವರ್ಷಗಳ ಇತಿಹಾಸವಿದೆ. ಹಾಕಿ ಆಟವನ್ನು ಪರ್ಷಿಯನ್ನರು ‘‘ಪೋಲೋ’’ ಎಂದೂ, ರೋಮನ್ನರು ‘ಪಗನಾಶಿಯಾ’ ಐಲ್ಯಾಂಡಿನಲ್ಲಿ ‘‘ಹರ್ಲಿ’’ ಎಂದೂ ಸ್ಕಾಟ್‍ಲೆಂಡ್‍ನಲ್ಲಿ ‘ರೆಂದ’ ಎಂದೂ, ಫ್ರಾನ್ಸ್‍ನಲ್ಲಿ ‘ಹಕೆಟ್’ ಎಂದು ಕರೆದರೆ ಇಂಗ್ಲೆಂಡಿನಲ್ಲಿ ‘‘ಬ್ಯಾಂಡಿ’’ ಎಂದು ಕರೆಯುತ್ತಾರೆ. ಹಾಕಿ ಎಂಬ ಪದವು ಫ್ರೆಂಚ್ ಭಾಷೆಯಾದ ‘‘ಹೂಕೆ’’ (ಬಾಗಿದ) ಎಂಬ ಹೆಸರಿನಿಂದ ಬಂದಿದೆ. ಆಧುನಿಕ ಹಾಕಿಯು 1938ರಲ್ಲಿ ಇಂಗ್ಲೆಂಡ್‍ನಲ್ಲಿ ಜನ್ಮ ತಾಳಿತು.
ಭಾರತ ಹಾಕಿಯಲ್ಲಿ ವಿಶ್ವಮಟ್ಟದಲ್ಲಿ ಭಾರೀ ಹೆಸರು ಸಂಪಾದಿಸಿದೆ. ಇಂದಿಗೂ ಕೂಡ ಭಾರತ ತಂಡ ವಿಶ್ವ ಮಟ್ಟದಲ್ಲಿ ಬಲಿಷ್ಠವೇ ಇಂದು ಚಾಂಪಿಯನ್ ತಂಡಗಳು ಎನ್ನಿಸಿಕೊಂಡಿರುವ ಆಸ್ಟ್ರೇಲಿಯಾ, ಹಾಲೆಂಡ್, ಜರ್ಮನಿ ಮುಂತಾದ ತಂಡಗಳಿಗೆ ಸೋಲುಣಿಸಬಲ್ಲ ಶಕ್ತ ತಂಡವೆಂದರೆ ಭಾರತ. ಹಾಕಿಯಲ್ಲಿ ಕೊಡಗಿನ ಅನೇಕ ಆಟಗಾರರು ವಿಶ್ವ ಮಟ್ಟದಲ್ಲಿ ಆಡಿ ಪದಕಗಳನ್ನು ಗಳಿಸಿ, ಭಾರತಕ್ಕೆ ಹೆಸರನ್ನು ತಂದಿದ್ದಾರೆ. ಕೊಡಗಿನ ಎಂ. ಪಿ. ಗಣೇಶ್, ಗೋವಿಂದ ಒಲಿಂಪಿಕ್ಸ್‍ನಲ್ಲಿ ಆಡಿ, ಭಾರತಕ್ಕೆ ವಿಶ್ವ ಮಟ್ಟದಲ್ಲಿ ಗೆಲುವು ಸಾಧಿಸಲು ಪ್ರಧಾನ ಪಾತ್ರ ವಹಿಸಿದ್ದಾರೆ. ಎಂ. ಪಿ. ಗಣೇಶ್‍ರವರು ಇಂದಿಗೂ ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ ತಂಡದಲ್ಲಿ ಈ ಹಿಂದೆ ಅದ್ಭುತ ಆಟಗಾರರಿದ್ದರು. ಭಾರತ ಆಗ ಹಾಕಿಯಲ್ಲಿ ಭಾರೀ ಹೆಸರನ್ನು ಮಾಡಿತ್ತು. ವಿಶ್ವಕಪ್ ಹಾಕಿ, ಏಷ್ಯನ್‍ಗೇಮ್ಸ್‍ನಲ್ಲಿ ಭಾರತ ಜಯಭೇರಿ ಭಾರಿಸಿತ್ತು. 1970, 1974, 1978ರ ಅವಧಿಯಲ್ಲಿ ಭಾರತದ ಸಾಧನೆಗೆ ಇಡೀ ಕ್ರೀಡಾ ವಿಶ್ವವೇ ಅಚ್ಚರಿಗೊಂಡಿತ್ತು. ಅಂದು ಭಾರತದ ಸಾಧನೆಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಆಟಗಾರ ಅಶೋಕ್‍ಕುಮಾರ್, ಇದು ಹಾಕಿ ಮಾಂತ್ರಿಕನೊಬ್ಬನ ಅದ್ಭುತ ಸಾಧನೆ.
ಬಾಲ್ಯ : ಹಾಕಿ ವಿಶ್ವ ಲೋಕದ ಪರಿಚಿತ ಹೆಸರು ಅಶೋಕ್‍ಕುಮಾರ್ ಉತ್ತರ ಪ್ರದೇಶದ ಮೀರತ್‍ನಲ್ಲಿ ಜೂನ್ 1 ರಂದು 1950ರಲ್ಲಿ ಜನಿಸಿದರು. ತನ್ನ 6ನೇ ವಯಸ್ಸಿನಲ್ಲೇ ಹಾಕಿಯನ್ನು ಅಭ್ಯಸಿಸಿದ ಇವರಿಗೆ ಹಾಕಿ ದಂತ ಕತೆ, ಅದ್ಭುತ ಹಾಕಿ ತಾರೆ, ತಂದೆ ಧ್ಯಾನ್‍ಚಂದರೇ ಆದರ್ಶ ಹಾಗೂ ಸ್ಪೂರ್ತಿ. ಕಿರಿಯ ಶಾಲಾ ತಂಡದಲ್ಲಿ ಆಡುತ್ತಿದ್ದ ಇವರು, ಮುಂದುವರೆದು ಪದವಿಯನ್ನು ಕ್ಲಬ್ ಮಟ್ಟದಲ್ಲಿ ಗಳಿಸಿ, ನಿರಂತರ ನಾಲ್ಕು ವರ್ಷಗಳ ಕಾಲ ಉತ್ತರ ಪ್ರದೇಶ ರಾಜ್ಯವನ್ನು ಹಾಕಿಯಲ್ಲಿ ಪ್ರತಿನಿಧಿಸಿದರು. ಸಣ್ಣ ವಯಸ್ಸಿನಲ್ಲೇ ಅದ್ಭುತ ನಿಯಂತ್ರಣವನ್ನು ಚೆಂಡಿನ ಮೇಲೆ ಇವರು ಹೊಂದಿದ್ದರು.
ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ 1966-67ರಲ್ಲಿ ಮತ್ತು 1968-69ರಲ್ಲಿ ಅಖಿಲ ಭಾರತ ವಿಶ್ವ ವಿದ್ಯಾನಿಲಯದಲ್ಲಿ ಅಶೋಕ್‍ಕುಮಾರ್ ಆಡಿದರು. ಕ್ರಮೇಣ ಮೋಹನ್ ಬಗಾನ್ ಕ್ಲಬ್‍ನಲ್ಲಿದ್ದು 1971ರಲ್ಲಿ ಬೆಂಗಳೂರಿ ನಲ್ಲಿನಡೆದ ರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದರು.
ಸಾಧನೆಗಳ ಗೊಂಚಲು : ಹಾಕಿ ದಂತಕತೆ ಧ್ಯಾನ್‍ಚಂದ್‍ರ ಮಗನಾದ ಇವರು ಸಾಧಿಸಿದ ಸಾಧನೆಗಳು ಮಹತ್ವದ್ದು, 1974ರ ಟೆಹ್ರಾನ್ ಮತ್ತು 1978ರ ಬ್ಯಾಂಕಾಕ್‍ನಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡರು. 1972ರಲ್ಲಿ ಮ್ಯೂನಿಚ್‍ನಲ್ಲಿ ಮತ್ತು 1976ರಲ್ಲಿ ಮಾಂಟ್ರಿಯನಲ್ಲಿ ಭಾಗವಹಿಸಿದ ಇವರು ಮ್ಯೂನಿಚ್‍ನಲ್ಲಿಯ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಭಾರತ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 1971ರಲ್ಲಿ ಸಿಂಗಾಪುರದಲ್ಲಿ ನಡೆದ ಇಂಟರ್‍ನ್ಯಾಷನಲ್ ಪಂದ್ಯಾವಳಿಯಲ್ಲಿ ಹಾಗೂ 1979ರ ಇಸ್ಸಾಂಡದಲ್ಲಿ ನಡೆದ ಹಾಕಿ ಟೂರ್ನಿ ಪಂದ್ಯಾಟದಲ್ಲಿ ಭಾರತ ತಂಡಕ್ಕೆ ನಾಯಕರಾಗಿದ್ದರು. 1974ರ ಆಲ್ ಏಷ್ಯನ್‍ಟೀಮ್‍ನಲ್ಲಿ ಆಡಿದಾಗ ಇವರ ಆಟವನ್ನು ಮೊದಲನೆಯ ಬಾರಿಗೆ ಧ್ಯಾನ್‍ಚಂದ್ ವೀಕ್ಷಿಸಿ ಸಂತಸಪಟ್ಟಿದ್ದರು.
ಬಾರ್ಸಿಲೋನಾದಲ್ಲಿ 1971ರ ವಿಶ್ವಕಪ್‍ನಲ್ಲಿ ಕಂಚಿನ ಪದಕ, ಹಾಗೂ 1973ರ ಆಮ್ಸ್‍ಡಾರ್ಮ್‍ನಲ್ಲಿ ನಡೆದ ಎರಡನೇ ವಿಶ್ವಕಪ್‍ನಲ್ಲಿ ಬೆಳ್ಳಿಪದಕ, ಕೌಲಲಂಪುರದಲ್ಲಿ 1975ರ ವಿಶ್ವಕಪ್‍ನಲ್ಲಿ ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಚಿನ್ನದ ಪದಕ ಪಡೆದುಕೊಂಡರು. ಇದು ಅವರ ವೃತ್ತಿ ಜೀವನದ ಪ್ರಮುಖ ಆಟವಾಗಿತ್ತು. ನಾಲ್ಕನೇಯ ವಿಶ್ವಕಪ್ ಹಾಗೂ ವೃತ್ತಿ ಜೀವನದ ಕೊನೆಯ ವಿಶ್ವಕಪ್ 1978ರ ಅರ್ಜೆಂಟೀನಾದಲ್ಲಿ ನಡೆದದ್ದಾಗಿದೆ. ಅದ್ಭುತ ಕೌಶಲ್ಯ, ಚೆಂಡಿನ ನಿಯಂತ್ರಣ ಹೊಂದಿದ್ದ ಇವರು 1975ರಲ್ಲಿ ಭಾರತ ವಿಶ್ವಕಪ್ ಗಳಿಸಿದ ತಂಡದ ಸದಸ್ಯರಾಗಿದ್ದರು. ಇವರಿಗೆ 1974ರಲ್ಲಿ ಅರ್ಜುನ ಪ್ರಶಸ್ತಿ, 2013ರಲ್ಲಿ ಉತ್ತರ ಪ್ರದೇಶ ಸರಕಾರ ಯಶ್ ಭಾರತಿ ಸನ್ಮಾನ್ ನೀಡಿ ಗೌರವಿಸಿತು.
ಭಾರತ ಹಾಕಿ ಗೆಲುವಿನ ವೈಭವಕ್ಕೆ, ಸಂಭ್ರಮಕ್ಕೆ ಅಂದು ಧ್ಯಾನ್‍ಚಂದ್ ಎಂಬ ಹಾಕಿ ಮಾಂತ್ರಿಕ ಅಪಾರ ಕೊಡುಗೆ ಕೊಟ್ಟರೆ, ಅವರ ಮಗ ಅಶೋಕ್‍ಕುಮಾರ್ ಕೂಡ ಅಪಾರ ಸಾಧನೆಗಳನ್ನು ಮಾಡಿ ಭಾರತ ಗೆಲುವಿನ ಹಾಕಿ ಹಿರಿಮೆಗೆ ಕಳಶಪ್ರಾಯರಾಗಿದ್ದಾರೆ. ಇವರ ಸಾಧನೆಗಳು ಭವಿಷ್ಯದ ಹಾಕಿ ಪಟುಗಳಿಗೆ ಆದರ್ಶಪ್ರಾಯವಾಗಿದೆ. ಮುಂದೆ ಭಾರತ ವಿಶ್ವಕಪ್ ಹಾಗೂ ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗಳಿಸಿ ಹಿಂದಿನ ಹೆಮ್ಮೆಗೆ ಪಾತ್ರವಾಗಲಿ.
-ಹರೀಶ್ ಸರಳಾಯ,
ಮಡಿಕೇರಿ.