ಕೂಲಿ ಅವಲಂಬಿತ ಕಾರ್ಮಿಕರು, ಬಡ ನಿರ್ಗತಿಕ ವರ್ಗದವರಿಗೆ ಸಹಕಾರ ಒದಗಿಸುವ ಮೂಲಕ ವೀರಾಜಪೇಟೆ ನಗರದ ಡೈರೇಕ್ಟ್ ರಿಲೀಫ್ ಚಾರಿಟಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಬಡವರ ದೀನ ದಲಿತರ ಉದ್ಧಾರ, ಜೀವನದಲ್ಲಿ ಹೊಸ ಆಶಾ ಭಾವನೆ ಮೂಡಿಸುವ ಸಲುವಾಗಿ ವೀರಾಜಪೇಟೆ ನಗರದಲ್ಲಿ ವಿವಿಧ ಅಂಗಡಿ ಮಳಿಗೆಯಲ್ಲಿ ಕಾರ್ಯನಿರ್ವಹಿಸುವ ದಿನಕೂಲಿ ನೌಕರರು, ಆಟೋ ಚಾಲಕರು ತೋಟದ ಕೂಲಿ ಕಾರ್ಮಿಕರು ಮತ್ತು ಇತರ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವ ತರುಣರು ಹುಟ್ಟು ಹಾಕಿದ ಡೈರೆಕ್ಟ್ ರಿಲೀಫ್ ಚಾರಿಟಿ ಸಂಸ್ಥೆಯು ಕಳೆದ ಎರಡು ತಿಂಗಳಿನಿಂದ ನಿರ್ಗತಿಕರ ಬಾಳಿಗೆ ಬೆಳಕಾಗಿ ಕಾರ್ಯನಿರ್ವಹಿಸುತ್ತಿದೆ. ನೆಹರು ನಗರದ ವೃದ್ಧ ಪೋಷಕರನ್ನು ಕಡೆಗಣಿಸಿ ಮಕ್ಕಳು ಹೊರ ನಡೆದಿದ್ದರು ಕಾಲು ನೋವಿನಿಂದ ಬಳಲುತಿದ್ದ 62 ವರ್ಷದ ಶಾಹಿದಾ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ, ಸುಣ್ಣದ ಬೀದಿಯ ಪಾಶ್ರ್ವವಾಯು ಪೀಡಿತ ಆಶ್ವಾಕ್ ಎಂಬುವವರಿಗೆ, ಹಾಕತ್ತೂರು ಗ್ರಾಮದಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ನೀಡಿರುವ ಸಂಸ್ಥೆ ಕಡಂಗದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿಷ್ಣು ಎಂಬುವವರಿಗೆ ಸುಮಾರು 30 ಸಾವಿರ ಹಣವನು ಚಿಕಿತ್ಸೆ ವೆಚ್ಚಕ್ಕಾಗಿ ನೀಡಿದೆ. ಯಾವುದೇ ನೆರವನ್ನು ಸಂಸ್ಥೆಯು ಆರ್ಥಿಕ ಸಹಾಯದ ಮನವಿ ಸಲ್ಲಿಸಿದ ವ್ಯಕ್ತಿಗಳ ಸ್ವಗೃಹಕ್ಕೆ ತೆರಳಿ ನೀಡಲಾಗುತ್ತಿದೆ. ಎಂದು ಸಂಸ್ಥೆಯ ಅಧ್ಯಕ್ಷರಾದ ಪಿ. ಕೆ. ಲಿನಿ ಕುಂಜು ಅವರು ಪತ್ರಿಕೆಗೆ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಕುಂಜು ಅವರು ಸಂಸ್ಥೆಯು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಧರ್ಮದ ಬಾಂಧವರು ಒಂದೇ ಎಂಬ ಸೂರಿನಡಿಯಲ್ಲಿ ನಗರಕ್ಕೆ ಹೊಂದಿಕೊಂಡಿರುವಂತೆ 10 ಕಿ.ಮೀ ಅಂತರದ ಒಳಗಿನ ಗ್ರಾಮದ ನಿರ್ಗತಿಕ ವ್ಯಕ್ತಿಗಳಿಗೆ ಸೇವೆ ಒದಗಿಸುತ್ತಿದೆ. ಒಂದು ದಿನ ಕೂಲಿ ಹಣದಲ್ಲಿ ಅಲ್ಪಮೊತ್ತದ ಹಣವನ್ನು ಉಳಿಕೆ ಮಾಡಿಕೊಂಡು ಜನಸೇವೆಗೆ ಮುಡಿಪಾಗಿಸಿದ್ದಾರೆ. ವಾರದಲ್ಲಿ ಒಂದು ದಿನ ತಲಾ ರೂ. 50 ರಂತೆ ಚಂದಾಹಣ ಸಂಸ್ಥೆಗೆ ಪಾವತಿಮಾಡಲಾಗುತ್ತಿದ್ದು ಸಂಗ್ರಹಿಸಲಾದ ಹಣದಿಂದ ಸಂಸ್ಥೆಯು ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಸೇವೆಗೆ ಧನ ಸಹಾಯ ಒದಗಿಸಿಕೊಡಲಾಗುತ್ತಿದ್ದು ಇಂದಿನವರೆಗೆ ಸುಮಾರು 10-15 ಮಂದಿ ನಿರ್ಗತಿಕ ಬಂಧುಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರಾಗಿ ಟಿ.ಎಂ. ಅಮಲುದ್ದೀನ್, ಕಾರ್ಯದರ್ಶಿಯಾಗಿ ಶರ್ಫರಾಜ್ ಖಾನ್ ಎಂ. ಸಹ ಕಾರ್ಯದರ್ಶಿಯಾಗಿ ಟಿ. ಎಸ್. ತನ್ವೀರ್ ಮತ್ತು ಖಜಾಂಚಿಯಾಗಿ ಕೆ.ಎಂ. ಸಲ್ಮಾನ್ ಫರೋಕ್ ಮತ್ತು 35 ಮಂದಿ ಸದಸ್ಯರು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.