ಚೆಟ್ಟಳ್ಳಿ, ಫೆ. 26: ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ ಪ್ರವಾಹದಿಂದ ಕಾವೇರಿ ನದಿ ಉಕ್ಕಿ ಹರಿದು ನೆಲ್ಲಿಹುದಿಕೇರಿ ವ್ಯಾಪ್ತಿಯ ನದಿ ದಡ ಗ್ರಾಮದ ಮನೆಗಳು ಹಾನಿಯಾಗಿ ನೂರಾರು ಕುಟುಂಬಗಳು ಸಂಕಷ್ಟಕ್ಕೊಳಗಾಗಿದ್ದವು.

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಅಭ್ಯತ್‍ಮಂಗಲ ಬಳಿ ಜಾಗ ಗುರುತಿಸಿದೆ. ಸಂಪೂರ್ಣ ಮನೆ ಕಳೆದುಕೊಂಡ ನೂರಾರು ಕುಟುಂಬಗಳಿಗೆ ನಿವೇಶನ ಹಂಚಿಕೆಗೆ ತಲಾ 2 ಸೆಂಟ್ ಜಾಗ ನೀಡಿರುವುದರಿಂದ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ ಮೂರೂವರೆ ಸೆಂಟ್ ಜಾಗ ನೀಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸಕ್ಕೆ ತೆರಳಿ ನೆಲ್ಲಿಹುದಿಕೇರಿ ಸಂತ್ರಸ್ತರು ಮನವಿ ಮಾಡಿದ್ದರು.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಸಾಬು ವರ್ಗೀಸ್ ನೇತೃತ್ವದಲ್ಲಿ ಶಾಸಕರ ನಿವಾಸಕ್ಕೆ ತೆರಳಿದ ನೂರಾರು ಸಂತ್ರಸ್ತರು ಪ್ರವಾಹ ಸಂದರ್ಭದಲ್ಲಿ ಮನೆ ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದ ಬದುಕು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟರು.

ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರಿಗಳು ಕೆಲವು ಗೊಂದಲ ಸೃಷ್ಟಿಸಿದ್ದು ಇದನ್ನು ಸರಿಪಡಿಸುವ ಮೂಲಕ ಪರಿಹಾರ ಹಾಗೂ ಬಾಡಿಗೆ ರೂಪದಲ್ಲಿ ನೀಡಬೇಕಾದ ಹಣವನ್ನು ಇದುವರೆಗೆ ಅಧಿಕಾರಿಗಳು ನೀಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪ್ರತಿ ವರ್ಷವೂ ಮಳೆ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ನೂರಾರು ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ. ಕಳೆದ ಬಾರಿಯೇ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಪ್ರವಾಹದಿಂದ ಮನೆ ಆಸ್ತಿ ಪಾಸ್ತಿ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ನೆಲ್ಲಿಹುದಿಕೇರಿ ಸುತ್ತಮುತ್ತಲ ಸ್ಥಳಗಳಲ್ಲಿ ಕೆಲವು ಪೈಸಾರಿ ಜಾಗಗಳನ್ನು ಒತ್ತುವರಿ ತೆರವುಗೊಳಿಸಿ ಎಲ್ಲ ಕುಟುಂಬಗಳಿಗೂ ಶಾಶ್ವತ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನಿವೇಶನ ಹಂಚಿಕೆ ಜಾಗವನ್ನು ಹೆಚ್ಚಳ ಮಾಡಲು ಶ್ರಮಿಸುವುದಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಾಬು ವರ್ಗೀಸ್ ಮಾತನಾಡಿ, ಪ್ರವಾಹದ ನಂತರ ತಿಂಗಳುಗಟ್ಟಲೆ ಪರಿಹಾರ ಕೇಂದ್ರದಲ್ಲಿ ನೆಲೆಸಿ ನಿರಂತರ ಹೋರಾಟ ಮಾಡಿದ ಫಲವಾಗಿ ಶಾಸಕರ ಪ್ರಯತ್ನದಿಂದ ಸರ್ಕಾರ ಸ್ಪಂದಿಸಿ ಶಾಶ್ವತ ಸೂರು ಕಲ್ಪಿಸುವಲ್ಲಿ ಮುಂದಾಗಿದೆ. ನಿವೇಶನ ಹಂಚಿಕೆ ಜಾಗವನ್ನು ಹೆಚ್ಚಳ ಮಾಡಿ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಹಾಗೂ ಬಾಡಿಗೆ ಹಣವನ್ನು ನೀಡಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಮಾತನಾಡಿ, ಶಾಸಕರ ವಿಶೇಷ ಪ್ರಯತ್ನದಿಂದ ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಶ್ವತ ಸೂರು ಕಲ್ಪಿಸುವಲ್ಲಿ ಮುಂದಾಗಿರುವುದಕ್ಕೆ ಸಂತ್ರಸ್ತರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಬ್ರಿಜಿತ್ ಲಿಲ್ಲಿ, ಸಂತ್ರಸ್ತರಾದ ಉಣ್ಣಿಕೃಷ್ಣ, ಅನೀಶ್ ,ಅಪ್ಪು, ಮಧು, ಸಂಗೀತ, ಗಣೇಶ್, ವಿನ್ಸಿ, ಶಾಂತ, ರಾಜಿ, ಪ್ರೀತಿ, ಶುಭ, ಬಿಂದು, ರಮಣಿ ಸೇರಿದಂತೆ ಮತ್ತಿತರರು ಇದ್ದರು.