ಜಾಗತೀಕರಣದ ಜಂಜಾಟದ ನಡುವೆ ನಮ್ಮ ಸಹಜೀವನ ಶೈಲಿ ಕುಂದುತ್ತಿರುವ ಈ ಕಾಲಘಟ್ಟದಲ್ಲಿ, ಪ್ರತಿಷ್ಠೆಗೆ ಬಲಿಯಾಗಿ ನಾವು ಕಳೆದುಕೊಂಡ ಅಮೂಲ್ಯ ಸಂಪ್ರದಾಯಗಳ ಬಗ್ಗೆ ಮತ್ತೆ ನಾವೇ ಆಸಕ್ತರಾಗುತ್ತಿರುವುದು ಉತ್ತಮ ಬೆಳವಣಿಗೆ. ಸಾವಯವ ಕೃಷಿ, ಆಹಾರ, ವೈದ್ಯ ಪದ್ಧತಿಗಳೇ ನೈಜವಾದುದು ಮತ್ತು ನಿಸರ್ಗಕ್ಕೆ ಹತ್ತಿರವಾದುದು ಎಂಬ ನಮ್ಮ ಪರಂಪರೆ ಯನ್ನು ಇಡೀ ವಿಶ್ವವೇ ಹಿಂಬಾಲಿಸುವಂತಾಗಿದೆ. ಇಂತಹ ಸುಸಂದರ್ಭದಲ್ಲಿ ಅಲ್ಲೊಂದು, ಇಲ್ಲೊಂದು ಸಾಧನೆಗಳಾಗುತ್ತಿರುವುದೂ ಸುಳ್ಳಲ್ಲ. ದೇಸೀ ಗೋ ತಳಿಗಳ ಮಹತ್ವ ಅರಿತ ನಾಪೋಕ್ಲು ಸಮೀಪದ ರೈತರೊಬ್ಬರು, ದೂರದ ಗುಜರಾತ್‍ನಿಂದ ಕಾಂಕ್ರೀಜ್ ತಳಿಯ ಹಸುಗಳ ಸಾಕಾಣಿಕೆಗೆ ಮುಂದಡಿಯಿಟ್ಟಿದ್ದಾರೆ. ಯಥೇಚ್ಛ ಹಾಲು ನೀಡುವ ಮತ್ತು ದಣಿವರಿಯದೆ ದುಡಿಯುವ ಕಾಂಕ್ರೀಜ್ ಗೋವುಗಳು ಇದೀಗ ಎಲ್ಲರ ಆಕರ್ಷಣೆಗೆ ಪಾತ್ರವಾಗಿವೆ.
ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ನಿವಾಸಿ ಟಿ. ಎಸ್. ಮಂಜಯ್ಯ ಮೂಲತ: ಕೃಷಿಕರು. ಇವರ ಅಳಿಯ ನಾಗರಾಜ್ ಸಿಂಗಾಪುರದಲ್ಲ್ಲಿ ಇಂಜಿನಿಯರ್ ಹುದ್ದೆಯಲ್ಲಿದ್ದಾರೆ. ನಾಗರಾಜ್ ಅವರ ಕೆಲವು ಸ್ನೇಹಿತರು ಗುಜರಾತ್‍ನವರು. ಗೆಳೆಯರ ಒಡನಾಟದಿಂದ ಕಾಂಕ್ರೀಜ್ ಹಸುಗಳ ಮಹತ್ವ ಅರಿತ ನಾಗರಾಜ್, ತಮ್ಮ ಮಾವನ ಜಮೀನಿನಲ್ಲಿ ಹೈನುಗಾರಿಕೆಗೆ ನಾಂದಿ ಹಾಡಿದರು. ಕಾಂಕ್ರೀಜ್ ತಳಿಯ 1 ಹೋರಿ, 6 ಹಸುಗಳು ಮತ್ತು 5 ಕರುಗಳನ್ನು ಸುಮಾರು 1.6 ಲಕ್ಷ ಬಾಡಿಗೆ ನೀಡಿ, ಟ್ರಕ್ ಮೂಲಕ ಕಲ್ಲುಮೊಟ್ಟೆಗೆ ತಂದರು. ಒಂದೊಂದು ಹಸು ತಲಾ 40 ರಿಂದ 45 ಸಾವಿರ ಬೆಲೆ ಬಾಳುವಂತದ್ದು, ಗುಜರಾತ್ ರಾಜ್ಯದ ಕಛ್ ಹಾಗೂ ರಾಜಸ್ಥಾನದ ಜೋಧಪುರ, ಕಾಂಕ್ರೀಜ್ ತಳಿಗಳ ತವರೂರು. ಅತ್ಯಧಿಕ ಹಾಲು ನೀಡುವುದರಿಂದ ಮತ್ತು ರೈತರ ಸಂಗಾತಿಯಾಗಿ ದುಡಿಯುವುದರಿಂದ ಕಾಂಕ್ರೀಜ್ ತಳಿಗಳಿಗೆ ಭಾರೀ ಬೇಡಿಕೆಯಿದೆ. ಈ ಹಸುಗಳನ್ನು ರೈತರು ಹೆಚ್ಚಾಗಿ ಸಾಕುತ್ತಾರೆ.
ಸದ್ಯ ಮಂಜಯ್ಯ ಅವರು ಹೊಸ ಕೊಟ್ಟಿಗೆ ನಿರ್ಮಾಣ ಮಾಡುತ್ತಿದ್ದು, ಇದೀಗ ಹಸುಗಳನ್ನು ಬಯಲಲ್ಲಿ ಬಿಟ್ಟು ಸಾಕುತ್ತಿದ್ದಾರೆ. ಕಾಂಕ್ರೀಜ್ ಹಸುಗಳು ಕೊಡಗಿನ ಪರಿಸರಕ್ಕೆ ಒಗ್ಗಿಕೊಳ್ಳುವವರೆಗೂ, ಅದರ ಪಾಲನೆಗಾಗಿ ಗುಜರಾತ್‍ನಿಂದಲೇ ರಾಜು ಎಂಬ ಸಹಾಯಕನನ್ನೂ ಕರೆತರಲಾಗಿದೆ. ಹಸುಗಳು ಮನೆಯವರೊಂದಿಗೆ ನಿಧಾನವಾಗಿ ಒಗ್ಗಿಕೊಳ್ಳಲಾರಂಭಿಸಿವೆ. ಇದೀಗ ಮೈಸೂರಿನಿಂದ ತರಿಸಲಾಗುವ ಹಸುವಿನ ಹಿಂಡಿಯನ್ನು ನೀಡಲಾಗುತ್ತಿದೆ. ಅಲ್ಲದೆ, ಹಸುಗಳು ಗದ್ದೆ ಬಯಲಲ್ಲಿ ಯಥೇಚ್ಛವಾಗಿರುವ ಹುಲ್ಲನ್ನೂ ಮೇಯುತ್ತವೆ.
ಮಂಜಯ್ಯ ಅವರು ತಮ್ಮ ಪತ್ನಿ ರಾಣಿ, ಮಗಳು ಪಲ್ಲವಿ ಸೇರಿ ಈ ಹಸುಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಸದ್ಯ ಹಸುಗಳು ತಲಾ 5 ಲೀಟರ್ ಹಾಲು ನೀಡುತ್ತಿದ್ದು, ಸಮೀಪದ ಅಂಗಡಿ, ಮನೆಗಳಿಗೆ ನೀಡಲಾಗುತ್ತಿದೆ. ಹಾಲಿಗೆ ಭಾರೀ ಬೇಡಿಕೆಯಿದ್ದರೂ, ಆರಂಭಿಕವಾಗಿ ಮಂಜಯ್ಯ ಲೀಟರ್‍ಗೆ 40 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ವಿಶೇಷವೆಂದರೆ, ಕಾಂಕ್ರೀಜ್ ತಳಿಗಳ ಬೆಣ್ಣೆ ಮತ್ತು ತುಪ್ಪಕ್ಕೆ ವಿಪರೀತ ಬೇಡಿಕೆಯಿದೆ. ಕೆ.ಜಿ.ಗೆ 2 ಸಾವಿರ ರೂಪಾಯಿಗೂ ಹೆಚ್ಚಿನ ದರವಿದೆ. ಒಂದು ಸಂತೋಷದ ವಿಚಾರವೆಂದರೆ, ಕಾಂಕ್ರೀಜ್ ತಳಿಗಳ ಹಾಲು ಮತ್ತು ಹಾಲಿನ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸಲು ಮಡಿಕೇರಿಯ ವೈದ್ಯರೊಬ್ಬರು ಮಂಜಯ್ಯ ಅವರನ್ನು ಸಂಪರ್ಕಿಸಿದ್ದಾರೆ.
ಕಾಂಕ್ರ್ರೀಜ್ ತಳಿಯ ಗೋವುಗಳು ಆಕಾರದಲ್ಲಿ ದೊಡ್ಡದಿದ್ದರೂ, ಸ್ವಭಾವದಲ್ಲಿ ಶಾಂತ ಜೀವಿಗಳು. ಸಾಮಾನ್ಯವಾಗಿ ಬೂದು, ಅಪರೂಪಕ್ಕೆ ನಸುಕಪ್ಪು ಬಣ್ಣದ ಈ ಗೋವುಗಳಿಗೆ ಉಬ್ಬಿದಂತಿರುವ ಸಣ್ಣ ಮೂಗು, ನೀಳವಾದ ನೇತಾಡುವ ಕಿವಿ, ಗಟ್ಟಿಯಾದ ನಿಡಿದಾದ ಕೊಂಬುಗಳಿವೆ. ಹೋರಿಗಳು ಭುಜ, ತೊಡೆ ಮತ್ತು ಕಾಲುಗಳಲ್ಲಿ ಕಪ್ಪು ಬಣ್ಣ ಹೊಂದಿರುವುದು ವಿಶೇಷ. ಗುಜರಾತ್‍ನ ಕಾಂಕ್ರೀಜ್ ತಾಲೂಕಿನ ಹೆಸರೇ ಈ ತಳಿಗಳಿಗೆ ಅಂಟಿಕೊಂಡಿದೆ. ಇವು ಜ್ವರ, ಉಷ್ಣಾಂಶದ ಒತ್ತಡಗಳನ್ನು ಸುಲಭವಾಗಿ ಸಹಿಸಿಕೊಳ್ಳುವ ಗುಣ ಹೊಂದಿವೆ.
ಕೊಡಗಿನ ಗ್ರಾಮೀಣ ಪರಿಸರಕ್ಕೆ ಈ ಹಸುಗಳು ಬಹುಬೇಗನೇ ಹೊಂದಿಕೊಳ್ಳುತ್ತವೆ. ಜಿಲ್ಲೆಯಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಸಣ್ಣ ಬೆಳೆಗಾರರು ಮತ್ತು ಸಾಮಾನ್ಯ ಜನರು ಕೆಲಸವಿಲ್ಲದೆ, ಆದಾಯವೂ ಇಲ್ಲದೆ ಬಸವಳಿದಿರುವ ಈ ದಿನಗಳಲ್ಲಿ ಹೈನುಗಾರಿಕೆ, ಪರ್ಯಾಯವಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ದೇಸಿ ತಳಿಯಾದ ಮತ್ತು ಅಧಿಕ ಆದಾಯ ತಂದುಕೊಡಬಲ್ಲ ಕಾಂಕ್ರೀಜ್ ತಳಿಯ ಸಾಕಣೆ ನಿಜಕ್ಕೂ ಉತ್ತಮ ಪ್ರಯತ್ನ ಎನ್ನಬಹುದು. ಮಂಜಯ್ಯ ಅವರ ಮನೆಯ ಆವರಣದಲ್ಲಿ ಮತ್ತು ಗದ್ದೆ ಬಯಲಲ್ಲಿ ಕಾಣಸಿಗುವ ಕಾಂಕ್ರೀಜ್ ಹಸುಗಳು ಎಲ್ಲರನ್ನೂ ಆಕರ್ಷಿಸತೊಡಗಿದೆ. ಮಾಹಿತಿ ಪಡೆದುಕೊಳ್ಳಲು ಪ್ರತೀ ದಿನ ಅನೇಕ ಜನರು ಇತ್ತ ಧಾವಿಸುತ್ತಿದ್ದಾರೆ.
-ದುಗ್ಗಳ ಸದಾನಂದ.