ವೀರಾಜಪೇಟೆ, ಫೆ. 26: ಆಸ್ಟ್ರೇಲಿಯಾ, ಸಿಂಗಾಪುರ್ ಹಾಗೂ ಲಂಡನ್ ದೇಶಗಳಲ್ಲಿ ಮನ್ನಣೆ ಪಡೆದಿರುವ ಇಲ್ಲಿನ ದೇವಣಗೇರಿಯ ಸೋಲೋ ಎಕ್ಷಿಬಿಷನ್ ತಂಡದ ಚಿತ್ರಕಲಾ ಪ್ರದರ್ಶನವನ್ನು ತಾ. 28 ರಿಂದ ಮಾರ್ಚ್ 1ರ ತನಕ ವೀರಾಜಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಂಡದ ಟಿ.ಕೆ. ಉಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಮೇಶ್ ದೇವಣಗೇರಿ ಗ್ರಾಮದ ಕಾಫಿ ಪ್ಲಾಂಟರ್ 86 ವರ್ಷ ವಯಸ್ಸಿನ ಪಾಲೇಕಂಡ ಎಂ. ಅಯ್ಯಪ್ಪ ಅವರು ಸುಮಾರು 70 ವರ್ಷಗಳಿಂದಲೂ ತನ್ನ ಇತರ ಸೇವೆಗಳ ಜೊತೆಯಲ್ಲಿಯೂ ಚಿತ್ರಕಲೆಯ ಹವ್ಯಾಸವನ್ನು ಬೆಳೆಸಿಕೊಂಡಿದ್ದು, ದೇಶಗಳಲ್ಲಿಯೂ ಇವರ ಚಿತ್ರಕಲಾ ಪ್ರದರ್ಶನ ಯಶಸ್ಸನ್ನು ಕಂಡಿದೆ. ಈಗಾಗಲೇ ಸುಮಾರು 40ಕ್ಕೂ ಅಧಿಕ ಚಿತ್ರಕಲೆಗಳು ಹೆಸರುವಾಸಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ತಂಡದ ಕೆ.ಎಂ. ರವಿ ಮಾತನಾಡಿ, ಇಲ್ಲಿನ ಗೋಣಿಕೊಪ್ಪ ರಸ್ತೆಯಲ್ಲಿರುವ ಶ್ಯಾನ್ಭಾಗ್ನ ಕಟ್ಟಡ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ತಾ. 28 ರಂದು ಬೆಳಿಗ್ಗೆ 11ಗಂಟೆಗೆ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಾಗುವುದು.
ಸಮಾರಂಭದಲ್ಲಿ ಅರಮೇರಿ ಕಳಂಚೇರಿ ಮಠಾಧೀಶ ಶಾಂತಾಮಲ್ಲಿಕಾರ್ಜುನ ಸ್ವಾಮೀಜಿ, ಹಿರಿಯ ವಕೀಲ ಎಸ್.ಆರ್. ಜಗದೀಶ್, ಚಿತ್ರಕಲಾವಿದ ಬಿ.ಎಸ್. ಸತೀಶ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ತನಕ ಚಿತ್ರಕಲಾ ಪ್ರದರ್ಶನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದ್ದು ಚಿತ್ರಕಲಾ ಪ್ರೇಮಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.