ಮಡಿಕೇರಿ, ಫೆ. 26: ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯ ಶ್ರೀಅಯ್ಯಪ್ಪ ದೇವಾಲಯದ ಪುನರ್‍ಪ್ರತಿಷ್ಠೆ ಬ್ರಹ್ಮಕಲಶೋತ್ಸವ ತಾ. 29 ರಿಂದ ಮಾ. 2 ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯ ನಾಗೇಶ್ ಕಾಲೂರು ಮಾತನಾಡಿ, ಪಾರಂಪರಿಕವಾಗಿ ಮುತ್ತುನಾಡು ಎಂದು ಕರೆಯಲ್ಪಡುವ ಕಾಲೂರು ಗ್ರಾಮದಲ್ಲ್ಲಿರುವ ಎಂಟು ಶತಮಾನಗಳಷ್ಟು ಪುರಾತನವಾದ ಶ್ರೀಅಯ್ಯಪ್ಪ ದೇವಾಲಯದ ಜೀರ್ಣೋದ್ಧಾರವಾಗಿದೆ ಎಂದರು. ಪ್ರಾಕೃತಿಕ ವಿಕೋಪದಿಂದ ಜೀರ್ಣೋ ದ್ಧಾರಕ್ಕೆ ಹಿನ್ನಡೆಯಾಗಿತ್ತಾದರು, ಇದೀಗ ನಾಡಿನ ಉದಾರ ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ವೇದಮೂರ್ತಿ ಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದೆ. ತಾ. 29 ರಂದು ಬೆಳಿಗ್ಗೆ 8 ಗಂಟೆಗೆ ನಿಡುವಟ್ಟು ಶ್ರೀ ಭದ್ರಕಾಳಿ ದೇವಾಲಯದಿಂದ ಬೊಳ್ಳಚ್ಚೂರು ಪೊವ್ವದಿ ದೇವಾಲಯದವರೆಗೆ ಹೊರೆಕಾಣಿಕೆ ಸೇವೆಯ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ ಸೋಮಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಸಂಜೆ 4 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ ಜರುಗಲಿದೆ.
ಮಾ. 1 ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾಯಶ್ಚಿತ್ತ ಹೋಮ, ಪಂಚಬ್ರಹ್ಮ ಹೋಮ, ತತ್ವ ಹೋಮ, ತತ್ವ ಕಲಶ, ಕಲಶಾಭಿಷೇಕ ನಡೆಯಲಿದ್ದು, ಸಂಜೆ 5 ಗಂಟೆಯಿಂದ ನವಶಕ್ತಿ ಪೂಜಾ, ಅಷ್ಟೋತ್ತರ ಶತ ಬ್ರಹ್ಮ ಕಲಶಾಧಿವಾಸ, ಪ್ರಧಾನ ಹೋಮ, ಶಯ್ಯಾಧಿವಾಸ ನಡೆಯಲಿದೆ.
ಮಾ. 2 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಯಾಗ ನಡೆಯಲಿದ್ದು, 9.15 ರಿಂದ 9.30 ಗಂಟೆಯೊಳಗೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಪ್ರಸನ್ನ ಪೂಜೆ, ಅವಸ್ರುತ ಬಲಿ ಹಾಗೂ ಪ್ರಸಾದ ವಿತರಣೆಯಾಗಲಿದೆ. ಮೂರು ದಿನವು ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಪಂಚಲೋಹದ ವಿಗ್ರಹ
ದೇವಾಲಯದ ದೇವರ ವಿಗ್ರಹವನ್ನು ಕೇರಳದ ಶಿಲ್ಪಿ ಪ್ರಕಾಶ್ ಅವರು ಪಂಚಲೋಹದಲ್ಲಿ ನಿರ್ಮಿಸಿಕೊಟ್ಟಿದ್ದು, ಕಾರ್ಕಳದ ಶಿಲ್ಪಿ ಲೋಕನಾಥ್ ಆಚಾರ್ಯ ಅವರ ನೇತೃತ್ವದಲ್ಲಿ ಗರ್ಭಗುಡಿಯ ಕೆತ್ತನೆ ಕೆಲಸಗಳು ನಡೆದಿರುವುದಾಗಿ ನಾಗೇಶ್ ಕಾಲೂರು ಮಾಹಿತಿ ನೀಡಿದರು.
ಸಮಿತಿ ಕಾರ್ಯದರ್ಶಿ ಎ.ಟಿ. ಮಾದಪ್ಪ ಮಾತನಾಡಿ, ದೇವಾಲಯವನ್ನು ಸುಮಾರು ರೂ. 61 ಲಕ್ಷ ವೆಚ್ಚದಲ್ಲಿ ಜೀರ್ಣೊದ್ಧಾರ ಮಾಡಿರುವುದಾಗಿ ತಿಳಿಸಿದರು.
ದೇಗುಲದ ಹಿನ್ನೆಲೆ: ಕಾಲೂರು ಗ್ರಾಮದ ಶ್ರೀ ಅಯ್ಯಪ್ಪನನ್ನು ‘ಬೊಳ್ಳಿಬಿಲ್ಲ್ ಅಯ್ಯಪ್ಪ’ ಎಂದು ಕರೆಯಲಾಗುತ್ತದೆ. ಇಲ್ಲಿ ಅಯ್ಯಪ್ಪ ಎಂದರೆ ಕಿರಾತ ರೂಪಿ ಈಶ್ವರ. ಪುರಾಣ ಕತೆÉಯೊಂದರ ಪ್ರಕಾರ ವನ ಸಂಚಾರಿಯಾದ ಅಯ್ಯಪ್ಪನು ತನ್ನ ಇಬ್ಬರು ತಂಗಿಯಂದಿರಾದ, ನಿಡುವಟ್ಟು ಗ್ರಾಮದಲ್ಲಿ ನೆಲೆನಿಂತಿರುವ ನಿಡುವಟ್ಟು ಪೂವ್ವದಿ, ಬೊಳ್ಳಚ್ಚೂರು ಗ್ರಾಮದಲ್ಲಿ ನೆಲೆನಿಂತ ಬೊಳ್ಳಚ್ಚ ಪೊವ್ವದಿಯೊಂದಿಗೆ ಕಾಲೂರು ಗ್ರಾಮದ ಈ ಅರಣ್ಯದಲ್ಲಿ ನೆಲೆನಿಂತ ನೆಂದು ಪ್ರತೀತಿ. ದ್ವಾಪರಯುಗದಲ್ಲಿ ಅರ್ಜುನನು ಪಾಶುಪತಾಸ್ತ್ರಕ್ಕಾಗಿ ತಪಸ್ಸು ಮಾಡಿ ಈ ಕಿರಾತರೂಪಿ ಈಶ್ವರನನ್ನು ಒಲಿಸಿಕೊಂಡನೆಂದು ಕೂಡಾ ಹೇಳಲಾಗುತ್ತದೆ. ದೇವಾಲಯದ ಆವರಣದಲ್ಲಿರುವ ಭದ್ರಕಾಳಿ ದೇವಿಯ ಶಿಲಾಮೂರ್ತಿ ಯೊಂದರ ಅಧ್ಯಯನದಿಂದ ಹೊರಬಂದಿರುವ ಮಾಹಿತಿಯ ಪ್ರಕಾರ ಈ ಶಿಲಾಮೂರ್ತಿಗೆ ಸರಿಸುಮಾರು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ದೇವಾಲಯದ ವಿಶೇಷತೆ ಎಂದರೆ ಗ್ರಾಮಸ್ಥರು ಇಲ್ಲಿ ಏನೇ ಹರಕೆ ಹೊತ್ತುಕೊಂಡರೂ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಸಾಕು ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆಯಾದರೆ ಹರಸಿಕೊಂಡರೆ ವಾಸಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಪ್ರತಿ ವರ್ಷದ ಕುಂಬಮಾಸದಲ್ಲಿ ದೇವಾಲಯದಲ್ಲಿ ವಾರ್ಷಿಕ ಹಬ್ಬ ನಡೆಯಲಿದ್ದು, ಕೊಡವ ಜಾನಪದ ರೀತಿಯಲ್ಲೇ ಇಲ್ಲಿನ ಹಬ್ಬ ಆಚರಿಸಲ್ಪಡುತ್ತದೆ. ಸುಮಾರು 12 ದಿವಸ ನಡೆಯುವ ಹಬ್ಬದಲ್ಲಿ ಬಾಳೊಪಾಟ್, ದುಡಿಕೊಟ್ಟ್ ಸೇರಿದಂತೆ ವಿವಿಧ ರೀತಿಯ ಆಚರಣೆಗಳಿರುತ್ತದೆ.
ಗೋಷ್ಠಿಯಲ್ಲಿ ಗ್ರಾಮಸ್ಥರು ಹಾಗೂ ಸದಸ್ಯರಾದ ಕನ್ನಿಕಂಡ ಎಂ. ಪೆಮ್ಮಯ್ಯ, ಕೊಳುಮಾಡಂಡ ಕೆ. ದೇವಯ್ಯ ಹಾಗೂ ಕೊಳುಮಾಡಂಡ ಜಿ. ಯೋಗೇಶ್ ಉಪಸ್ಥಿತರಿದ್ದರು.