ಕೂಡಿಗೆ, ಫೆ. 27: ಅರಣ್ಯಕ್ಕೆ ಬೆಂಕಿ ತಗುಲದಂತೆ ಅರಣ್ಯ ಇಲಾಖೆಯ ವತಿಯಿಂದ ಮುಂಜಾಗ್ರತ ಕ್ರಮವಾಗಿ ರಸ್ತೆಯ ಎರಡು ಬದಿಗಳಿಂದ ಅರಣ್ಯದ 5 ಮೀಟರ್ವರೆಗೆ ಬೇಳೂರು ಬಾಣೆಯ ತಿರುವಿನಿಂದ ಹುದುಗೂರು ಅರಣ್ಯ ವ್ಯಾಪ್ತಿಯವರೆಗೆ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಒಣ ಎಲೆಗಳನ್ನು ಒಂದೆಡೆ ಹಾಕಿ ಬೆಂಕಿ ಹಾಕಿ ನಂದಿಸಿ, ಅರಣ್ಯಕ್ಕೆ ಬೆಂಕಿ ತಗುಲದಂತೆ ಕ್ರಮವಹಿಸಲಾಗುತ್ತಿದೆ.
ಸೋಮವಾರಪೇಟೆ-ಕುಶಾಲನಗರ ಹೆದ್ದಾರಿಯಲ್ಲಿ ಹೆಚ್ಚು ದಾರಿ ಹೋಕರು, ಪ್ರವಾಸಿಗರು ಬರುವುದರಿಂದ ಆಕಸ್ಮಿಕವಾಗಿ ಬೆಂಕಿ ಕಿಡಿ ಬಿದ್ದರೂ ಅರಣ್ಯದಂಚಿನಿಂದ ಇಡೀ ಅರಣ್ಯವೇ ಬೆಂಕಿಗೆ ಆಹುತಿಯಾಗುತ್ತದೆ. ಅರಣ್ಯ ಇಲಾಖೆಯ ಹುದುಗೂರು ಉಪವಲಯ ಅರಣ್ಯ ಇಲಾಖೆ ಕಳೆದ 10 ದಿನಗಳಿಂದ ಮುಂಜಾಗ್ರತ ಕ್ರಮದಲ್ಲಿ ತೊಡಗಿದ್ದಾರೆ.
ಪ್ರವಾಸಿಗರು ಹೆಚ್ಚು ಸಂಚರಿಸುವುದರಿಂದ ರಸ್ತೆಯ ಬದಿಗಳಲ್ಲಿ ಅರಣ್ಯ ಸಂರಕ್ಷಣೆಯ ಹಾಗೂ ಬೆಂಕಿ ತಗುಲದಂತೆ ವಹಿಸಬೇಕಾದ ಮುಂಜಾಗ್ರತೆಯ ಕ್ರಮದ ಬಗ್ಗೆ ಬಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಸಾರ್ವಜನಿಕರ ಸಹಕಾರವನ್ನು ಸಹ ಕೋರಲಾಗಿದೆ. ಸೋಮವಾರಪೇಟೆ - ಹುದುಗೂರು ಮಧ್ಯಭಾಗವು ಮೀಸಲು ಅರಣ್ಯ ಪ್ರದೇಶವಾಗಿದ್ದು, ಕಾಡಾನೆಗಳ ಹಾವಳಿ ಇರುವುದರಿಂದ ಈ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚು ಕಾಲ ನಿಲ್ಲದಂತೆ ಇಲಾಖೆಯ ವತಿಯಿಂದ ಸೂಚನೆ ನೀಡಲಾಗುತ್ತಿದೆ ಎಂದು ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಅವರು ತಿಳಿಸಿದ್ದಾರೆ.
ಈ ಕಾರ್ಯದಲ್ಲಿ ಹುದುಗೂರು ಉಪ ವಲಯ ಅರಣ್ಯ ಕೇಂದ್ರದ ಹಿರಿಯ ಅರಣ್ಯ ರಕ್ಷಕರಾದ ರಾಜಪ್ಪ, ಕಿರಣ್ ಸೇರಿದಂತೆ ಹತ್ತಕ್ಕು ಹೆಚ್ಚು ಸಿಬ್ಬಂದಿ ವರ್ಗದವರು ಹಾಗೂ ಆ ವ್ಯಾಪ್ತಿಯ ಗ್ರಾಮಸ್ಥರು ತೊಡಗಿದ್ದಾರೆ.