ನಾಪೆÇೀಕ್ಲು, ಫೆ. 26 : ಅಭಿವೃದ್ಧಿ ಬಗ್ಗೆ ರಾಜಕೀಯ ಬೇಡ ಅಭಿವೃದ್ಧಿ ವಿಚಾರದಲ್ಲಿ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಪಕ್ಷ ಬೇಧ ಮರೆತು ಸಹಕಾರ ನೀಡಿದರೆ ಉತ್ತಮ ಎಂದು ಎಂಎಲ್‍ಸಿ ವೀಣಾ ಅಚ್ಚಯ್ಯ ಹೇಳಿದರು. ನಾಪೆÇೀಕ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆತಾಲೋಕು ಸಮೀಪ ಕುಲ್ಲೇಟ್ಟಿರ ಮಾದಪ್ಪ- ಚಿಣ್ಣವ್ವ ದಂಪತಿಗಳು ಉದಾರವಾಗಿ ನೀಡಿದ ಜಾಗದಲ್ಲಿ ಸುಮಾರು ರೂ. 8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಅವರು ಮಾತನಾಡಿದರು. ಇಂದು ಜಾಗಕ್ಕೆ ಅಧಿಕ ಬೆಲೆ ಇದ್ದರೂ ನಮ್ಮ ಮಕ್ಕಳ ಶ್ರೇಯೋಬಿವೃದ್ಧಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಚಿಕ್ಕ ಮಕ್ಕಳ ಕಲಿಕೆಗಾಗಿ ಮತ್ತು ಅವರನ್ನು ಭವಿಷ್ಯದ ಉತ್ತಮ ಪ್ರಜೆಯಾಗಿಸಲು ಉದಾರ ನೆರವನ್ನು ನೀಡಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅವರು ಕನ್ನಡದ ಉಳಿವಿಗಾಗಿ ಇಂದು ಸರಕಾರ ಅಂಗನವಾಡಿ ಮಟ್ಟದಿಂದಲೇ ಕಲಿಕೆಗೆ ಅವಕಾಶವನ್ನು ಕಲ್ಪಿಸಿ ಭಾಷೆಯ ಬೆಳವಣಿಗೆಗೆ ಒತ್ತು ನೀಡಿದೆ ಎಂದರು. ಈ ಅಂಗನವಾಡಿಯ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಮುರುಳಿಧರ್ ಕರುಂಬಮ್ಮಯ್ಯ, ತಾಲೋಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಸ್ಥಳದಾನಿ ಕುಲ್ಲೇಟಿರ ಅರುಣಾ ಬೇಬ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಇಂದಿರಾ ಹರೀಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಆರ್‍ಎಂಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯತ್ ಸದಸ್ಯರು, ತಾ. ಪಂಚಾಯತ್ ಇ.ಓ ಲಕ್ಷ್ಮಿ, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೀಲಾ, ಪಿಡಿಒ ಚೊಂದಕ್ಕಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಯವರು ಇದ್ದರು.