ಮಡಿಕೇರಿ, ಜ. 27: ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗಳಡಿ ವಿವಿಧ ಕಾರಣಗಳಿಂದ ಬ್ಲಾಕ್ ಮಾಡಲಾಗಿರುವ ಮನೆಗಳನ್ನು ಅನ್‍ಬ್ಲಾಕ್ ಮಾಡಿ ಒಂದು ತಿಂಗಳ ಕಾಲಾವಕಾಶ ನೀಡಿ ವಾಸ್ತವವಾಗಿ ಪ್ರಾರಂಭವಾಗಿರುವ ಮನೆಗಳನ್ನು ಜಿಪಿಎಸ್ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿ ಅರ್ಹ ಫಲಾನುಭವಿಗಳಿಗೆ ವಿಜಿಲ್ ಆ್ಯಪ್ ಮುಖಾಂತರ ಪರಿಶೀಲಿಸಿ ನಂತರ ಅನುದಾನ ಬಿಡುಗಡೆ ಮಾಡುವ ಬಗ್ಗೆ ಸರ್ಕಾರವು ಆದೇಶ ಹೊರಡಿಸಿದೆ ಎಂದು ಜಿ.ಪಂ.ಸಿಇಒ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಫಲಾನುಭವಿಗಳು ಈ ಆದೇಶವನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಜಿಲ್ಲೆಯಲ್ಲಿ ಒಟ್ಟು ಅನ್‍ಬ್ಲಾಕ್ ಆಗಿರುವ ಮನೆಗಳು 2187, ಮಡಿಕೇರಿಯಲ್ಲಿ 619, ಸೋಮವಾರಪೇಟೆಯಲ್ಲಿ 1067 ಮತ್ತು ವೀರಾಜಪೇಟೆಯಲ್ಲಿ 501 ಮನೆಗಳು ಎಂದು ಜಿ.ಪಂ.ಸಿಇಒ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.