ಕೂಡಿಗೆ, ಫೆ. 24 : ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಯುವಕರಲ್ಲಿ ಸಂಘಟನಾ ಮನೋಭಾವ ಬೆಳೆಯುವುದರ ಜೊತೆಗೆ ಒಗ್ಗೂಡುವಿಕೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪೂರಕವಾಗಿರುತ್ತದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹೇಳಿದರು. ಕೂಡುಮಂಗಳೂರಿನಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ದ್ವಿತೀಯ ವರ್ಷದ ಕೆವಿಎಲ್ ಹೊನಲು ಬೆಳಕಿನ ವಾಲಿಬಾಲ್ ಲೀಗ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಲ್ಲಿ ಮನೋಸ್ಥೈರ್ಯ ವನ್ನು ತುಂಬಲು ಮತ್ತು ಗ್ರಾಮಗಳ ಒಳಿತಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಡೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ.
ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಮಾತನಾಡಿ ಕ್ರೀಡೆಯ ಕುರಿತು ಆಸಕ್ತಿಯನ್ನು ಮೂಡಿಸಿಕೊಳ್ಳುವತ್ತ ಮನಃಪೂರ್ವಕವಾಗಿ ಶ್ರಮಿಸಬೇಕು. ಪ್ರತಿಯೊಬ್ಬ ಸ್ಪರ್ಧಿಯು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಂಡು ಆರೋಗ್ಯಯುತ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು ಮಾತನಾಡಿದರು. ವೇದಿಕೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ್, ಪಾರ್ವತಮ್ಮ ಸೋಮಾಚಾರಿ, ಸುರೇಶ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಹರೀಶ್ಕುಮಾರ್, ಕಾರ್ಯದರ್ಶಿ ರತೀಶ್, ಖಜಾಂಚಿ ವಿನೋದ್, ಉದ್ಯಮಿ ಶಶಿಕಿರಣ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಕ್ರೀಡಾಪಟುಗಳು ಇದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ಆಸ್ಕರ್ ವಾರಿಯರ್ಸ್ ತಂಡ ಪ್ರಥಮ ಸ್ಥಾನಗಳಿಸಿ ರೂ. 22222 ಹಾಗೂ ಟ್ರೋಫಿಯನ್ನು ಪಡೆದರು. ದ್ವಿತೀಯ ಸ್ಥಾನವನ್ನು ರಾಯಲ್ ಫ್ರೆಂಡ್ಸ್ ಬ್ಯಾಡಗೊಟ್ಟ ಗಳಿಸಿ ರೂ. 12222 ಹಾಗೂ ಗಿರೀಶ್ ಫ್ರೆಂಡ್ಸ್ ಕೂಡ್ಲೂರು ತಂಡ ತೃತೀಯ ಮತ್ತು ಪಟೇಲ್ ಫ್ರೆಂಡ್ಸ್ ತಂಡ ಚತುರ್ಥ ಬಹುಮಾನ ಗಳಿಸಿದರು. ಇದೇ ಸಂದರ್ಭ ಸ್ಥಳೀಯರಿಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಂಗೀತ ಕುರ್ಚಿ, ಬಾಂಬ್ ಇನ್ ದಿ ಸಿಟಿ ಮತ್ತಿತರ ಕ್ರೀಡಾಕೂಟಗಳನ್ನು ನಡೆಸಲಾಯಿತು.