ಮಡಿಕೇರಿ, ಫೆ. 25: ಸಾಮಾಜಿಕ ಜಾಲತಾಣ ವ್ಯಾಟ್ಸಾಪ್‍ನ ಮೂಲಕ ವಿಭಿನ್ನ ಪರಿಕಲ್ಪನೆಯೊಂದಿಗೆ ಉದಯವಾಗಿ ಕೊಡವ ಸಾಹಿತ್ಯ ಸೇರಿದಂತೆ ಮತ್ತಿತರ ಚಟುವಟಿಕೆ ಗಳನ್ನು ನಡೆಸುವ ನೋಂದಾಯಿತ ಸಂಸ್ಥೆಯಾಗಿ ಇತ್ತೀಚೆಗೆ ಕೊಡವಾಮೆರ ಕೊಂಡಾಟ ಎಂಬ ಸಂಘಟನೆ ಯೊಂದು ಅಸ್ತಿತ್ವಕ್ಕೆ ಬಂದಿದೆ. ಈ ಸಂಘಟನೆಯ ಪರಿಕಲ್ಪನೆಯಂತೆ ಹೊಸ ಪ್ರಯತ್ನವಾಗಿ 19 ವಿವಿಧ ಸಾಹಿತಿಗಳಿಂದ 19 ಪುಸ್ತಕಗಳನ್ನು ಹೊರತರಲಾಗಿದ್ದು, ಇದರ ಬಿಡುಗಡೆ ಸಮಾರಂಭ ತಾ. 23 ರಂದು ಬೆಂಗಳೂರು ಕೊಡವ ಸಮಾಜದಲ್ಲಿ ನೆರವೇರಿತು.

ಬೆಂಗಳೂರು ಕೊಡವ ಸಮಾಜವು ಕೊಡವ ಸಾಹಿತ್ಯ ದಿನ ಎಂಬ ಕಾರ್ಯಕ್ರಮವನ್ನು ಈ ಬಾರಿ ಆಯೋಜಿಸಿದ್ದು ಇದರಲ್ಲಿ ಕೊಡ ವಾಮೆರ ಕೊಂಡಾಟ ಸಂಘಟನೆಯ ಬರಹಗಾರರಿಂದ ವಿರಚಿತಗೊಂಡ ವಿವಿಧ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು. ಒಂದೇ ದಿನ ದಂದು 19 ಪುಸ್ತಕಗಳನ್ನು ಹೊರತರ ಲಾಗಿರುವದು ವಿಶೇಷವಾಗಿದೆ. ಬೆಂಗಳೂರು ಕೊಡವ ಸಮಾಜದ ಮೊದಲ ಸಾಹಿತ್ಯ ದಿನವು ಇದಕ್ಕೆ ಸಾಕ್ಷಿಯಾಯಿತು. ಸಮಾಜದ ಅಧ್ಯಕ್ಷ ಮುಕ್ಕಾಟಿರ ನಾಣಯ್ಯ, ಅಧ್ಯಕ್ಷತೆಯಲ್ಲಿ, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಪೂಮಾಲೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡವ ಸಮಾಜ ಗೌರವ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡವ ಸಮಾಜದ ಉಪಾಧ್ಯಕ್ಷೆ ಮೀರಾ ಜಲಜಕುಮಾರ್ ಹಾಗೂ ಸಮಾಜ ಪದಾಧಿಕಾರಿಗಳು ಹಾಜರಿದ್ದರು.

ಈ ವೇದಿಕೆಯಲ್ಲಿ, ಕೊಡವಾಮೆರ ಕೊಂಡಾಟ ಕೂಟದ ಸದಸ್ಯರಾದ ಬಾಚರಣಿಯಂಡ ಅಪ್ಪಣ್ಣ ರಾಣು ಅಪ್ಪಣ್ಣ ಅವರ ಅಜ್ಜತಾಯಿರ ಆರ ಬೇರ, ಮೂವೆರ ರೇಖಾಪ್ರಕಾಶ್ ಅವರ ತೀನಿಬೋಜ, ಉಳುವಂಗಡ ಕಾವೇರಿ ಉದಯ ಅವರ ನಾಟಕ ರಂಗ, ಅಪ್ಪಚಟ್ಟೋಳಂಡ ವನುವಸಂತ ಅವರ ವಿಧಿರ ಬಲೆಲ್, ಚಿಮ್ಮಚಿರ ಪವಿತ ರಜನ್ ಅವರ ಕ್‍ಗ್ಗಟ್ ರಸ, ಚಾಮೆರ ದಿನೇಶ್ ಬೆಳ್ಯಪ್ಪ ಅವರ ಬೊಳ್ಳಿಮಾಲೆ, ಮಿನ್ನಂಡ ಲಲಿತ ಕಾಳಯ್ಯ ಅವರ ಚಾಚೆ ಸಮ್ಮಂಧ, ಬಟ್ಟಕಾಳಂಡ ಮುತ್ತಣ ಅಯಿಂಗಡ, ಕೇಳಿ ಕೋಂದ ಕೊಡವ, ಕುಲ್ಲಚಂಡ ವಿನುತ ಕೇಸರಿ ಅವರ ಭಾವ ಜೊಪ್ಪೆ, ಕೋಟೆರ ಉದಯ್ ಪೂಣಚ್ಚ ಅವರ ಪಳಂಜೊಲ್ಲ್ ಪೊಟ್ಟಿ, ಅಂಜಪರವಂಡ ರಂಜು ಮುತ್ತಪ್ಪ ಅವರ ಬೈಗುಳ ಬೋಜ, ಸಣ್ಣುವಂಡ ಕಿಸು ದೇವಯ್ಯ ಅವರ ಚೆರ್ ಕವನ ಮಾಲೆ, ಮಿನ್ನಂಡ ಪ್ರೀತ್ ಜೋಯಪ್ಪ ಅವರ ಕಳಿಗೂಡ್, ಕೊಲ್ಲಿರ ಗೌರಮ್ಮ ಅವರ ಭಾವ ಬಟ್ಟೆಲ್, ಕದ್ದಣಿಯಂಡ ವಂದನ ಚಿಣ್ಣಪ್ಪ ಅವರ ವಕ್ಕಣೆ ಪೋಳಿಯ, ಅಜ್ಜಮಕ್ಕಡ ವಿನು ಕುಶಾಲಪ್ಪ ಅವರ ಕೊಡವಡ ಬದ್‍ಲ್ ಆಯಿದ, ಬೊಟ್ಟೋಳಂಡ ನಿವ್ಯ ದೇವಯ್ಯ ಅವರ ನಾ ಕಂಡ ಪಳೆಯಾಮೆ, ಚಾಮೆರ ಪ್ರಿಯ ದಿನೇಶ್ ಅವರ ಚೋದ್ಯ ಪತ್ತಾಯ, ಚೆಟ್ಟೋಳಿರ ಶರತ್ ಸೋಮಣ್ಣ ಅವರ ಒಡ್ಪಂಗತೆರ ಒಡ್ಡ್, ಪುಸ್ತಕಗಳು ಲೋಕಾರ್ಪಣೆ ಗೊಂಡವು. ಕೊಡವ ಸಾಹಿತ್ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ 19 ವಿಭಿನ್ನ ಪುಸ್ತಕಗಳನ್ನೊಳಗೊಂಡ 19 ಪುಸ್ತಕ ಬಿಡುಗಡೆಗೊಂಡಿದ್ದು, ಪ್ರಾರಂಭವಾಗಿ ಕೇವಲ ಆರು ತಿಂಗಳಲ್ಲಿಯೆ ಈ ಮೈಲಿಗಲ್ಲನ್ನು ಕೊಡವಾಮೆರ ಕೊಂಡಾಟ ಕೂಟವು ಸಾಧಿಸಿರುವುದಕ್ಕೆ ನೆರೆದಿದ್ದ ಸಾಹಿತ್ಯ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಯಿತು.