ಸೋಮವಾರಪೇಟೆ, ಫೆ. 25: ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವತಿಯಿಂದ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಸಂಸ್ಥಾಪಕರಾದ ಲಾರ್ಡ್ ಸ್ಟೀಫನ್ಸನ್ ಸ್ಮಿತ್ ಬೇಡನ್ ಪಾವೆಲ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಎಂ.ಜೆ. ಅಣ್ಣಮ್ಮ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ಮಕ್ಕಳ ಸಹಾಯ ವಾಣಿಯ ವತಿಯಿಂದ ಬಾಲ್ಯ ವಿವಾಹ, ಬಾಲಕಾರ್ಮಿಕ, ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಆರಕ್ಷಕ ಸಹಾಯಕ ಉಪನಿರೀಕ್ಷಕ ಸುಂದರ್ ಸುವರ್ಣ, ಮಕ್ಕಳ ಸಹಾಯ ವಾಣಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಎಚ್.ಆರ್. ಶೇಖರ್, ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಖಜಾಂಚಿ ಕೆ.ಟಿ. ಚಂದ್ರಕಲಾ, ಮಕ್ಕಳ ಸಹಾಯವಾಣಿ ಸಂಸ್ಥೆಯ ಯೋಗೇಶ್, ಕುಮಾರಿ, ಪ್ರವೀಣ್, ಶಾಲಾ ಶಿಕ್ಷಕರುಗಳಾದ ರಮೇಶ್, ಸವಿತಾ ಇದ್ದರು.