ಮಡಿಕೇರಿ, ಫೆ. 25 : ಕೊಡಗಿನ ಬೆಳೆಗಾರರು ಹಾಗೂ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ತಾ. 28 ರಂದು ಮಡಿಕೇರಿ ಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಪಕ್ಷದ ವಿವಿಧ ಘಟಕಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜನಪರ ಹೋರಾಟಗಳಿಗೆ ಸಜ್ಜಾಗುವಂತೆ ಕರೆ ನೀಡಿದರು. ಕೊಡಗಿನ ಬೆಳೆಗಾರರು ಹಾಗೂ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಕಾಳು ಮೆಣಸು, ಕಾಫಿ, ಭತ್ತ ಮತ್ತಿತರ ಬೆಳೆಗಳಿಂದ ನಷ್ಟ ಅನುಭವಿಸುತ್ತಿರುವ ಕೃಷಿಕ ವರ್ಗದ ನೆರವಿಗೆ ಸರ್ಕಾರಗಳು ಬರುತ್ತಿಲ್ಲ. ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ದಾಳಿಯಿಂದ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ.
ಆದ್ದರಿಂದ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ತಾ. 28 ರಂದು ಕಾಂಗ್ರೆಸ್ ಕಿಸಾನ್ ಘಟಕದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜುನಾಥ್ ಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಹಿರಿಯ ಮುಖಂಡರುಗಳಾದ ಯಂ.ಸಿ. ನಾಣಯ್ಯ, ಹೆಚ್.ಎಸ್. ಚಂದ್ರಮೌಳಿ, ಟಿ.ಪಿ. ರಮೇಶ್ ಮತ್ತಿತರರು ಪಕ್ಷದ ಬೆಳವಣಿಗೆಯ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಪ್ರಮುಖರಾದ ಪಿ.ಸಿ. ಹಸೈನಾರ್, ಪಿ.ಎಂ. ಖಾಸಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಿದೇರಿರ ನವೀನ್, ರಂಜಿ ಪೂಣಚ್ಚ, ಇಸ್ಮಾಯಿಲ್, ಅಪ್ಪು ರವೀಂದ್ರ, ಬಿ.ಬಿ. ಸತೀಶ್, ಅನಂತ್ ಕುಮಾರ್, ಡಿಸಿಸಿ ಉಪಾಧ್ಯಕ್ಷರು ಗಳಾದ ಸುರೇಶ್, ಹಂಸ ಕೊಟ್ಟಮುಡಿ, ಅಬ್ದುಲ್ ಸಲಾಂ, ಎಂ. ಎಸ್. ಪೂವಯ್ಯ, ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ. ಸುರೇಶ್, ಬೇಕಲ್ ರಮಾನಾಥ್, ಎಸ್.ಎಂ. ಚಂಗಪ್ಪ, ವಕ್ತಾರ ಟಿ. ಈ. ಸುರೇಶ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಮತ್ತಿತರರು ಹಾಜರಿದ್ದರು.