ಮಡಿಕೇರಿ, ಫೆ. 25: ಸೋಮವಾರಪೇಟೆ ತಾಲೂಕಿನ ಗರಗಂದೂರು ಮುಸ್ಲಿಂ ಜಮಾಅತ್ ಕಮಿಟಿ ಅಧೀನದಲ್ಲಿ ಕಾರ್ಯಾಚರಿಸು ತ್ತಿರುವ ಮಸ್ಜಿದುನ್ನೂರು ಸ್ವಲಾತ್ ಕಮಿಟಿ ಆಶ್ರಯದಲ್ಲಿ ತಾ. 27ರಂದು ಮೂರು ಮಂದಿ ಅನಾಥ ಹಾಗೂ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನಡೆಯಲಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗರಗಂದೂರು ಜಮಾಅತ್ ಕಮಿಟಿ ಸದಸ್ಯ ಎಂ.ಎಂ.ಮುಸ್ತಫಾ ಸಖಾಫಿ ಅವರು, ಅಂದು ಪೂರ್ವಾಹ್ನ 10 ಗಂಟೆಗೆ ಗರಗಂದೂರು ಮಸೀದಿಆವರಣದಲ್ಲಿ ಕಾಜೂರು ಝಿಯಾರತ್‍ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಅಸ್ಸಯ್ಯಿದ್ ಕೆ.ಎಸ್.ಆಟ್ಟಕೋಯ ತಂಙಳ್ ಕುಂಬೋಳ್ ಮತ್ತು ಎಮ್ಮೆಮಾಡು ತಂಙಳ್ ಎಂದೇ ಖ್ಯಾತರಾದಸಯ್ಯಿದ್ ಇಲ್ಯಾಸ್ ತಂಙಳ್ ಅವರು ವಿವಾಹ (ನಿಖಾಹ್)ದ ನೇತೃತ್ವ ವಹಿಸಲಿದ್ದಾರೆ ಎಂದರು.

ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಹತ್ತು ಹಲವು ಜನಪರ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸಮಿತಿ ವತಿಯಿಂದ ನಡೆಸಲಾಗುತ್ತಿರುವ 7ನೇ ವಿವಾಹ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ

(ಮೊದಲ ಪುಟದಿಂದ) ಪ್ರತಿ ವಧುವಿಗೂ ತಲಾ 5 ಪವನ್ ಚಿನ್ನಾಭರಣ ಮತ್ತು ವಧು-ವರರಿಗೆ ಬೇಕಾಗುವ ಉಡುಪು ಹಾಗೂ ವಿವಾಹದ ವೆಚ್ಚವನ್ನು ಸಮಿತಿಯೇ ಭರಿಸಲಿದೆ. ಕಾರ್ಯಕ್ರಮವನ್ನು ಜಮಾಅತ್ ಖತೀಬರಾದ ಹನೀಫ್ ಸಖಾಫಿ ಉದ್ಘಾಟಿಸಲಿದ್ದು, ಕಳಸದ ವಾಗ್ಮಿ ನೌಫಲ್ ತಂಙಳ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಹನೀಫ, ಕಾರ್ಯದರ್ಶಿ ಎ.ಅಬ್ದುಲ್ ರಹಿಮಾನ್, ಸದಸ್ಯ ಕೆ.ಎಂ.ಹನೀಫ್, ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಆರಿಫ್ ಹಾಗೂ ಕಾರ್ಯದರ್ಶಿ ಎ.ಖಾದರ್ ಉಪಸ್ಥಿತರಿದ್ದರು.