ಶ್ರೀಮಂಗಲ, ಫೆ. 25: ದ. ಕೊಡಗಿನಲ್ಲಿ ಕಳೆದ ಹಲವು ತಿಂಗಳಿನಿಂದ ಉಂಟಾಗಿರುವ ಹುಲಿ ಹಾವಳಿಗೆ ರೈತರು ಸಾಕಿದ ಜಾನುವಾರುಗಳು ಬಲಿಯಾಗುತ್ತಿದ್ದು, ಹುಲಿಯನ್ನು ಸೆರೆಹಿಡಿಯಲು ಸರಕಾರದಿಂದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ದ.ಕೊಡಗಿನ ನಾಲ್ಕೇರಿ, ಬೆಳ್ಳೂರು, ಹರಿಹರ, ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು ಕಳೆದ 4-5 ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿ ಬಲಿ ಪಡೆದಿದೆ.ರೈತರು ಸಾಕಿದ ಗೋವುಗಳ ಮೇಲೆ ಕೊಟ್ಟಿಗೆ ಹಾಗೂ ಮೇಯಲು ಕಟ್ಟಿದ್ದ ಸ್ಥಳಗಳಲ್ಲಿ ಹುಲಿ ದಾಳಿ ನಡೆಸುತ್ತಿದೆ. ದಾಳಿ ನಡೆಸಿದ ಸ್ಥಳಗಳಲ್ಲಿ ಹುಲಿಯ ಚಲನ-ವಲನ ಹಾಗೂ ಅದರ ಗುರುತು ಪತ್ತೆಗೆ ಅರಣ್ಯ ಇಲಾಖೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿತ್ತು. ಈ ಹಿಂದೆ ನಡೆದ ಹಲವು ಪ್ರಕರಣದಲ್ಲಿ ಹುಲಿ ಕ್ಯಾಮರಾಕ್ಕೆ ಟ್ರ್ಯಾಪ್ ಆಗಿದೆ. ತಾ. 15 ರಂದು ಬೆಳ್ಳೂರು ಗ್ರಾಮದಲ್ಲಿ ರೈತ ಗೋಪಾಲ್ ಅವರ ಹಸುವನ್ನು ಹಾಡಹಗಲೇ ಕೊಂದು ಹಾಕಿತ್ತು. ತಾ. 16 ರಂದು ಬೆಳ್ಳೂರು ಗ್ರಾಮದ ನೆರೆಯ ಗ್ರಾಮ ಹರಿಹರದಲ್ಲಿ ಮುಕ್ಕಾಟೀರ ಪೆಮ್ಮಯ್ಯ ಅವರ ಹಸುವಿನ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ತಾ. 16 ರ ರಾತ್ರಿ ಹರಿಹರ ಗ್ರಾಮದ ತೀತಿರ ಮಾದಪ್ಪ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 1 ಹಸು ಹಾಗೂ 1 ಕರುವನ್ನು ಕೊಂದು ಹಾಕಿತ್ತು. ಈ ಸಂದರ್ಭ ತೀತಿರ ಮಾದಪ್ಪ ಅವರ ಹಸುವಿನ ಮೇಲೆ ದಾಳಿ ನಡೆಸಿದ ಸ್ಥಳದಲ್ಲಿ ಕ್ಯಾಮರ ಟ್ರ್ಯಾಪ್ ಅಳವಡಿಸಲಾಗಿದ್ದು, ಇದಕ್ಕೆ ಹುಲಿಯ ಚಿತ್ರ ಸೆರೆಯಾಗಿದೆ. ಈ ಹಿಂದೆ ನಾಲ್ಕೇರಿ ಗ್ರಾಮದಲ್ಲಿ ಇರಿಸಿದ್ದ ಕ್ಯಾಮರಕ್ಕೆ ಟ್ರ್ಯಾಪ್ ಆದ ಹುಲಿಯೂ, ಹರಿಹರ ಗ್ರಾಮದಲ್ಲಿ ಟ್ರ್ಯಾಪ್ ಆದ ಹುಲಿಯೂ ತಾಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯಲ್ಲಿ ಈ ಹುಲಿಯಿಂದಲೇ ದಾಳಿಯಾಗುತ್ತಿರುವುದು ಬಹುತೇಕ ಖಚಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಹುಲಿಯನ್ನು ನಾಗರಹೊಳೆ ಹುಲಿ 186 (ಎನ್‍ಹೆಚ್‍ಟಿ186) ಎಂದು ಗುರುತಿಸಲಾಗಿದೆ. ಇದಲ್ಲದೆ, ದ.ಕೊಡಗಿನ ಹಲವು ಭಾಗದಲ್ಲಿ ದಾಳಿ ನಡೆಸಿರುವ ಹುಲಿ ಪ್ರಕರಣದಲ್ಲಿ ಜಾನುವಾರುಗಳ ಮೇಲೆ ಹುಲಿಯ ಬಲಗಡೆಯ ಕೆಳಭಾಗದ ಹಲ್ಲಿನ ಗಾಯದ ಗುರುತು ಆಳಕ್ಕೆ ಇಳಿಯುತ್ತಿಲ್ಲ.
(ಮೊದಲ ಪುಟದಿಂದ) ಇದರಿಂದ ಒಂದೇ ಹುಲಿ ಈ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹುಲಿ ಸೆರೆಗೆ ಅರಣ್ಯ ಇಲಾಖೆ ಕಳೆದ 4-5 ತಿಂಗಳಿನಿಂದಲೂ ಬೋನ್ ಇರಿಸಿ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ದ.ಕೊಡಗಿನ ಹಲವು ಗ್ರಾಮದಲ್ಲಿ ಹುಲಿ ದಾಳಿ ನಡೆಸಿದ ಸ್ಥಳಗಳಲ್ಲಿ ಅರಣ್ಯ ಇಲಾಖೆ ತಕ್ಷಣವೇ ಬೋನ್ ಇರಿಸಿ ಹುಲಿ ಸೆರೆಗೆ ಮುಂದಾಗುತ್ತಿತ್ತು.ಆದರೆ, ಹುಲಿ ಸೆರೆಗೆ ಯಾವುದೇ ಅನುಮತಿ ಇಲ್ಲದೆ ಬೋನ್ ಇರಿಸುವುದಕ್ಕೆ ರೈತ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಹರಿಹರ ಗ್ರಾಮದಲ್ಲಿ ತೀತಿರ ಮಾದಪ್ಪ ಅವರ ಹಸು-ಕರುವಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸ್ಥಳದಲ್ಲಿ ಅರಣ್ಯಾಧಿಕಾರಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಸಾರ್ವಜನಿಕರು, ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್, ಕೊಡಗು ಬೆಳೆಗಾರ ಒಕ್ಕೂಟ ಹುಲಿ ಸೆರೆಗೆ ಅನುಮತಿ ಮಂಜೂರಾಗದೆ ಬೋನ್ ಇರಿಸಿ ಹುಲಿ ಸೆರೆಗೆ ನಾಟಕೀಯವಾಗಿ ಪ್ರಯತ್ನಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅನುಮತಿ ಮಂಜೂರಾದ ನಂತರವಷ್ಟೇ ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳನ್ನು ಒತ್ತಾಯಿಸಲಾಗಿತ್ತು.
ಕೊಡಗಿನ ಅರಣ್ಯಾಧಿಕಾರಿಗಳು, ಹುಲಿ ಹಾವಳಿಯ ಗಂಭೀರ ಪರಿಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಾ. 20 ರಂದು ಹುಲಿ ಸೆರೆಗೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿ ಮಂಜೂರು ಮಾಡಿದ್ದಾರೆ.
ತಾ. 24 ರಂದು ಟಿ.ಶೆಟ್ಟಿಗೇರಿ ಗ್ರಾಮದ ಚೆಟ್ಟಂಡ ನಟೇಶ್ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರತಳಿಯ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಕೊಟ್ಟಿಗೆಯ ಸಮೀಪ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಎಚ್ಚೆತ್ತು ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ ಹುಲಿ ಹಸುವನ್ನು ಬಿಟ್ಟು ಪರಾರಿಯಾಗಿದೆ
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚೆಟ್ಟಂಡ ನಟೇಶ್ ಅವರ ಗದ್ದೆಯಲ್ಲಿ ಹುಲಿ ಸೆರೆಗೆ ಒಂದು ಬೋನ್ ಇರಿಸಿದ್ದು, ಹುಲಿಯನ್ನು ಸೆಳೆಯಲು ಬೋನಿನೊಳಗೆ ಜೀವಂತ ಹಂದಿ ಮರಿಯನ್ನು ಇರಿಸಲಾಗಿದೆ. ಇದಲ್ಲದೆ, ಬೆಳ್ಳೂರು ಗ್ರಾಮದ ರೈತ ಗೋಪಾಲ್ ಎಂಬವರ ಗದ್ದೆಯಲ್ಲಿ ಮತ್ತು ಹರಿಹರ ಗ್ರಾಮದ ತೀತಿರ ಮಾದಪ್ಪ ಅವರ ತೋಟದಲ್ಲಿಯೂ ಒಂದೊಂದು ಬೋನ್‍ನ್ನು ಈಗಾಗಲೇ ಹುಲಿ ದಾಳಿ ಮಾಡಿದ ಜಾನುವಾರುವಿನ ಕಳೆಬರ ಇರಿಸಿ ಹುಲಿ ಸೆರೆಗೆ ಅಣಿಗೊಳಿಸಲಾಗಿದೆ.
ಹುಲಿ ಕಾರ್ಯಾಚರಣೆ
ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಹುಲಿ ಸೆರೆಗೆ ಎನ್‍ಟಿಸಿಎ (ನ್ಯಾಷನಲ್ ಟೈಗರ್ ಕನ್ಸರ್‍ವೇಷನ್ ಅಥಾರಿಟಿ) ಮತ್ತು ಎಸ್‍ಓಪಿ (ಸ್ಟ್ಯಾಂಡರ್ಡ್ ಅಪರೇಷನ್ ಪ್ರೊಸಿಜರ್) ಗೈಡ್‍ಲೈನ್‍ನಂತೆ ಒಂದು ಸಮಿತಿ ರಚನೆ ಮಾಡಿ ಅದರ ಮುಖ್ಯಸ್ಥರಾಗಿ ವೀರಾಜಪೇಟೆ ಡಿಸಿಎಫ್ ಶಿವಶಂಕರ್ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯಲ್ಲಿ ಈ ವ್ಯಾಪ್ತಿಯ ಎಸಿಎಫ್‍ಗಳು, ಆರ್‍ಎಫ್‍ಗಳು ಮತ್ತು ಎನ್‍ಜಿಓ ನ ಮುಖ್ಯಸ್ಥರು, ಎನ್‍ಟಿಸಿಎ ಪ್ರತಿನಿಧಿ, ಸೇರಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.
ಇದಲ್ಲದೆ, ಹುಲಿ ಸೆರೆಯಾದರೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸಮಿತಿ ಮುಂದಾಗಿದೆ. ಈಗಾಗಲೇ ಈ ಸಮಿತಿಯು 4 ಪಶುವೈದ್ಯಾಧಿಕಾರಿಗಳು, 4 ಕೋವಿಗಳು, 4 ಶಾರ್ಪ್ ಶೂಟರ್(ಅರವಳಿಕೆ ಮದ್ದು ನೀಡಲು), ಹುಲಿಯ ಹೆಜ್ಜೆಯ ಮೂಲಕ ಜಾಡು ಹಿಡಿಯುವ ತಜ್ಞರು, ಅರವಳಿಕೆ ಮದ್ದು ನೀಡಿದ ನಂತರ ಅದನ್ನು ನಿಷ್ಕ್ರಿಯಗೊಳಿಸಿ ಮತ್ತೆ ಹುಲಿಗೆ ಪ್ರಜ್ಞೆ ಮರಳಿಸುವ ತಜ್ಞರು, 5 ಸಾಕಾನೆಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಮೊದಲ ಹಂತವಾಗಿ ಬೋನಿನ ಮೂಲಕ ಹುಲಿ ಸೆರೆಗೆ ಸಿದ್ಧತೆ ನಡೆದಿದ್ದು, ನಂತರದಲ್ಲಿ ಶಾರ್ಪ್ ಶೂಟರ್ ಮೂಲಕ ಹುಲಿ ಸೆರೆಗೆ ಅರವಳಿಕೆ ನೀಡಿ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಈಗಾಗಲೇ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿಗಳಾದ ಡಾ.ಮುಜೀದ್, ಡಾ.ನಾಗರಾಜ್, ಡಾ.ಮಂಜುನಾಥ್, ಅರವಳಿಕೆಯನ್ನು ಕೋವಿಯ ಮೂಲಕ ನೀಡುವ ಶಾರ್ಪ್ ಶೂಟರ್‍ಗಳಾದ ವೆಂಕಟೇಶ್ ಮತ್ತು ಅಕ್ರಮ್ ಅವರ ಸಂಪರ್ಕದಲ್ಲಿದ್ದು, ಯಾವುದೇ ಸಮಯದಲ್ಲಿ ಅವರು ಹುಲಿ ಸೆರೆಗೆ ತಕ್ಷಣ ಲಭ್ಯವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹರಿಹರದ ಸುಬ್ರಹ್ಮಣ್ಯ ದೇವಸ್ಥಾನ ಆವರಣದಲ್ಲಿರುವ ಮೈದಾನದಲ್ಲಿ ಹುಲಿ ಸೆರೆಗೆ ಸಾಕಾನೆ ಸಹಿತ ಕಾರ್ಯಾಚರಣೆಗೆ ಕ್ಯಾಂಪ್ ಮಾಡಲು ಸಿದ್ಧತೆ ಮಾಡಲಾಗಿದೆ.
ಹುಲಿ ಸೆರೆಯಾದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಜನರ ನೂಕು ನುಗ್ಗಲು ತಡೆಗಟ್ಟಿ ಶೀಘ್ರವಾಗಿ ಹುಲಿಯನ್ನು ಸುರಕ್ಷಿತವಾಗಿ ಸಾಗಿಸಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸ್ಥಳೀಯ ಗ್ರಾ.ಪಂ ಗಳಿಗೆ ಅರಣ್ಯ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.