ಕುಶಾಲನಗರ, ಫೆ. 25: ಟಿಬೇಟಿಯನ್ ನಿರಾಶ್ರಿತರ ಶಿಬಿರದ ಶಿಕ್ಷಣ ಕೇಂದ್ರಗಳಲ್ಲಿ ಕನ್ನಡ ಭಾಷೆ ಕಲಿಕೆಗೆ ವಿನಾಯ್ತಿ ನೀಡಬೇಕೆಂದು ಟಿಬೇಟಿಯನ್ ಪ್ರತಿನಿಧಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೈಲುಕೊಪ್ಪೆಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ಟಿಬೇಟಿಯನ್ ಆಂತರಿಕ ಸರಕಾರದ ಪ್ರಮುಖರು ಟಿಬೇಟಿಯನ್ ನಿರಾಶ್ರಿತ ಕೇಂದ್ರಗಳ ಶಾಲೆಗಳಲ್ಲಿ ಕನ್ನಡಕ್ಕೆ ವಿನಾಯ್ತಿ ನೀಡಬೇಕು. ಟಿಬೇಟಿಯನ್ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕೊಡಗು ಮತ್ತು ಮೈಸೂರು ಜಿಲ್ಲಾ ಭಾಗದ ಕಾರ್ಯಕರ್ತರು ಮೈಸೂರು ರಸ್ತೆಯಿಂದ ಶಿಬಿರಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ಸ್ವಲ್ಪಕಾಲ ಟಿಬೇಟಿಯನ್ನರ ವಿರುದ್ಧ ಘೋಷಣೆ ಕೂಗಿದರು.

ಪಿ.ಕೆ.ಜಗದೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯ ಕರ್ತರು ಟಿಬೇಟಿಯನ್ನರಿಗೆ ಧಿಕ್ಕಾರ, ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು ಎಂಬ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಕುಶಾಲನಗರ ಹೋಬಳಿ ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಪ್ರಮುಖರಾದ ಧನರಾಜ್, ಫ್ರಾನ್ಸಿಸ್ ಡಿಸೋಜ, ರೇಖಾ, ಅನಿತಾ ಉತ್ತಪ್ಪ, ಭಾಗೀರಥಿ ಮತ್ತಿತರರು ಇದ್ದರು.