ಕೂಡಿಗೆ, ಫೆ. 25: ಲೋಕೋಪಯೋಗಿ ಬಂದರು ಮತ್ತು ಒಳಸಾರಿಗೆ ಸಾಗಾಣಿಕ ಇಲಾಖೆ, ಸೋಮವಾರಪೇಟೆ ಉಪ ವಿಭಾಗದ ವತಿಯಿಂದ ಕೂಡಿಗೆಯಲ್ಲಿ ರಸ್ತೆ ಸಂಚಾರ ಮಾದರಿ ಗಣತಿ ಕೇಂದ್ರ ಪ್ರಾರಂಭಿಸಲಾಗಿದೆ. ಹಾಸನ ಹೆದ್ದಾರಿ ಮತ್ತು ಸೋಮವಾರಪೇಟೆ-ಕುಶಾಲನಗರ ವ್ಯಾಪ್ತಿಯ ರಸ್ತೆಯ ಕೇಂದ್ರಗಳಲ್ಲಿ ಗಣತಿ ಕೇಂದ್ರಗಳನ್ನು ಪ್ರಾರಂಭಿಸಿ ಹಗಲು ಮತ್ತು ರಾತ್ರಿ ಸಂಚರಿಸುವ ಎಲ್ಲಾ ವಾಹನಗಳ ಗಣತಿಯನ್ನು ಮಾಡಲಾಗುತ್ತಿದೆ.
ಇದರನ್ವಯ ವಾಹನ ಚಾಲನೆಯ ಸಂಖ್ಯೆ ಹೆಚ್ಚಿದ್ದಲ್ಲಿ ಇಲಾಖಾವಾರು ರಸ್ತೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲು ಮತ್ತು ದಿನಂಪ್ರತಿ ಚಲಿಸುವ ವಾಹನಗಳ ಸಂಖ್ಯೆಯ ಅನುಗುಣವಾಗಿ ರಸ್ತೆಯ ಗುಣಮಟ್ಟವನ್ನು ಹೆಚ್ಚಿಸುವ ಇಲಾಖೆಯ ನಿಯಮದನುಗುಣವಾಗಿ ಗಣತಿ ಕಾರ್ಯವು ಮೂರು ದಿನಗಳ ಕಾಲ ನಡೆಯಲಿದೆ.
ಈ ಸಂದರ್ಭ ಕುಶಾಲನಗರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೀಟರ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.