ಸುಂಟಿಕೊಪ್ಪ, ಫೆ. 25: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಎನ್‍ಎಸ್‍ಎಸ್ ಘಟಕವನ್ನು ಚೆನ್ನಮ್ಮ ಜೂನಿಯರ್ ಕಾಲೇಜಿನ ಎನ್‍ಎಸ್‍ಎಸ್ ಶಿಬಿರಾಧಿಕಾರಿ ಮೋಹನ್ ಹೆಗ್ಡೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾತನಾಡಿ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯು ಸರಕಾರದ ನಿರ್ದೇಶನದಂತೆ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಈಗ ಲಭ್ಯವಾಗುತ್ತಿದ್ದು, ಗ್ರಾಮೀಣ ಮಕ್ಕಳ ಬೆಳವಣಿಗೆಗೆ, ನಿಸ್ವಾರ್ಥ ಸಮಾಜ ಸೇವೆಗೆ ಪೂರಕವಾಗಿದೆ ಎಂದು ಹೇಳಿದರು. ಚೆನ್ನಮ್ಮ ಜೂನಿಯರ್ ಕಾಲೇಜಿನ ಅಧ್ಯಾಪಕ ರಾಜಸುಂದರನ್ ಮಾತನಾಡಿ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ದೃಷ್ಟಿಯಿಂದ ಎನ್‍ಎಸ್‍ಎಸ್ ಸ್ಥಾಪಿಸಲಾಗಿದೆ ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದರು. ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಟಿ. ಸೋಮಶೇಖರ್ ವ್ಯಕ್ತಿತ್ವ ವಿಕಸನ ಸೇವಾ ಮನೋಭಾವನೆ ಶ್ರಮದಾನದ ಆಸಕ್ತಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಪಡೆಯಬಹುದು ಎಂದು ಹೇಳಿದರು. ಸಮಾರಂಭದ ವೇದಿಕೆಯಲ್ಲಿ ಸಹ ಶಿಕ್ಷಕರುಗಳಾದ ಪವಿತ್ರ, ಶಾಂತಹೆಗ್ಡೆ, ಚಿತ್ರಾ, ಪುಷ್ಪಾ ಹಾಗೂ ಪವಿತ್ರ ಉಪಸ್ಥಿತರಿದ್ದರು.