ಮಡಿಕೇರಿ, ಫೆ. 24 : ಬೆಟ್ಟಗೇರಿ ಸಮೀಪದ ಅರುವತ್ತೋಕ್ಲು ಗ್ರಾಮದ ಶ್ರೀ ಮಹಾವಿಷ್ಣು ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿ ಗಳಿಂದ ತಾ. 19, 20ಮತ್ತು 21 ರಂದು ಜರುಗಿತು. ಮಹಾವಿಷ್ಣು, ಸಾನಿಧ್ಯ ದಲ್ಲಿರುವ ದೇವಾಲಯದಲ್ಲಿ; ವಾರ್ಷಿಕ ಉತ್ಸವ ಪ್ರಯುಕ್ತ ಭಂಡಾರವನ್ನು ದುಡಿ ಹಾಡು ಸಹಿತ ಭಂಡಾರ ಮನೆ ಯಿಂದ ದೇವಾಲಯಕ್ಕೆ ತಂದು ಅಂದಿಕೊಟ್ಟು, ದೀಪಾರಾಧನೆ ಮೂಲಕ ಚಾಲನೆ ನೀಡಲಾಯಿತು. ದೇವರ ಇರ್‍ಬೊಳಕ್, ತುಲಾಭಾರ, ಎತ್ತೇರಾಟ, ದೇವರ ಸುತ್ತಾಟ್ ನಡೆಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ, ಲಕ್ಷೀಪೂಜೆ, ವಿಷೇಶಪೂಜೆ, ಮಹಾಪೂಜೆ ನೆರವೇರಿಸಿ, ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸಾಂಪ್ರದಾಯಿಕ ಕಟ್ಟು ಸಡಿಸಲಾಯಿತು. ಬಳಿಕ, ದೇವರ ಬಿಂಬವನ್ನು ಊರ ನದಿಯಲ್ಲಿ ಜಳಕ ಮಾಡಿಸಿ, ವಸಂತ ಕಟ್ಟೆ ಪೂಜೆ, ಗುಳಿಗರಾಜನಿಗೆ ಪೂಜೆ ಸಲ್ಲಿಸಿ ಒಡ್ಡೋಲಗದೊಂದಿಗೆ ದೇವಸ್ಥಾನದ ಸುತ್ತ ಒಂಬತ್ತು ಸುತ್ತು, ಸುತ್ತಾಟ್ ನಡೆಸಿ, ತೀರ್ಥ ಮಂಟಪದಲ್ಲಿ ದೇವರಿಗೆ ಜೋಕಾಲಿ ಸೇವೆ ಸಲ್ಲಿಸಲಾಯಿತು. ವಸಂತ ಪೂಜೆ ಒಪ್ಪಿಸಿ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಉತ್ಸವ ತೆರೆ ಕಂಡಿತು.

ತಂತ್ರಿ ಶಂಕರನಾರಾಯಣ ವೈಲಾಯ, ಪ್ರಧಾನ ಅರ್ಚಕ ಶ್ರೀ ದೇವಿಪ್ರಸಾದ್‍ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು, ತಕ್ಕ ಮುಖ್ಯಸ್ಥರಾದ ತೆನ್ನೀರಾ ಮೈನಾ, ಚಾತುರನ ಪದ್ಮಾನಂದ, ಪೊಡೆಯಂಡ ಸುಬ್ಬಯ್ಯ, ಆಡಳಿತ ಮಂಡಳಿಯ ಅಧ್ಯಕ್ಷ ಪೂಜಾರಿರ ಮಾದಪ್ಪ, ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ, ಪದಾಧಿಕಾರಿಗಳಾದ ಮುಂಜಾಂದಿರ ವಾಸು ನಾಣಯ್ಯ, ಗೋವಿಂದಮ್ಮನ ರಾಮಯ್ಯ, ಕೋಳುಮಾಡಂಡ ಪೊನ್ನಪ್ಪ, ಚೆರುಮಾಡಂಡ ಸತೀಶ್, ತಳೂರು ಸೋಮಣ್ಣ, ಜಬ್ಬಂಡ ರಾಜೀವ್, ಮೂಟೇರ ಪ್ರಭಾಕರ, ಮುಕ್ಕಾಟಿರ ಕುಂಞಪ್ಪ, ತೆನ್ನೀರಾ ಪೆಮ್ಮಯ್ಯ, ತುಮ್ತಜ್ಜಿರ ಲವಿ, ಗ್ರಾಮ ಪಂಚಾಯತ್ ಸದಸ್ಯ ತೆನ್ನೀರಾ ರಮೇಶ್, ಮುಂಜಾಂದಿರ ಬೋಪಯ್ಯ, ಮುಂಜಾಂದಿರ ಅಚ್ಚಯ್ಯ ಸೇರಿದಂತೆ ಗ್ರಾಮಸ್ಥರು, ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು