ಕಣಿವೆ, ಫೆ. 24: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್ ಗಳ ವೇತನ ತಾರತಮ್ಯ ನಿವಾರಿಸಬೇಕು ಮತ್ತು ಖಾಲಿ ಇರುವ ಫಾರ್ಮಾಸಿಸ್ಟ್ ಗಳ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಫಾರ್ಮಸಿಸ್ಟ್ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕೆಂದು ಫಾರ್ಮಸಿಸ್ಟ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಸರ್ಕಾರವನ್ನು ಒತ್ತಾಯಿಸಿದರು.
ಕುಶಾಲನಗರದ ಹೊಟೇಲ್ ಕನ್ನಿಕಾ ಇಂಟನ್ರ್ಯಾಷನಲ್ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ಕೊಡಗು ಘಟಕದ ವತಿಯಿಂದ ಹಾಸನ, ಮಂಗಳೂರು ಮತ್ತು ಮೈಸೂರು ಜಿಲ್ಲೆಗಳ ಫಾರ್ಮಾಸಿಸ್ಟ್ ಗಳಿಗೆ ಹಮ್ಮಿಕೊಂಡಿದ್ದ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಫಾರ್ಮಾಸಿಸ್ಟ್ ಅಧಿವೇಶನವನ್ನು ಕೊಡಗು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್ ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್‍ಗಳು ಕಳೆದ ಬಾರಿ ಮಳೆಗಾಲದಲ್ಲಿ ಉಂಟಾದ ಪ್ರವಾಹದ ಸಂದರ್ಭ ಹಗಲಿರುಳೆನ್ನದೆ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಇದು ನಮ್ಮ ಇಲಾಖೆಗೆ ಹೆಮ್ಮೆಯ ವಿಚಾರ ಎಂದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಮಕ್ಕಳ ಆರೋಗ್ಯದಲ್ಲಿ ಸುರಕ್ಷಿತ ಔಷಧಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಸುಪರ್ಣಾ, ಕೊಡಗು ಜಿಲ್ಲಾ ಫಾರ್ಮಾಸಿಸ್ಟ್ ಸಂಘದ ಅಧ್ಯಕ್ಷೆ ಅಮಿನಾಬಿ ಅಧ್ಯಕ್ಷತೆ ವಹಿಸಿದ್ದರು. ಔಷಧಿ ಉಗ್ರಾಣದ ಕೊಡಗು ಪ್ರಭಾರಕ ಕೆ.ಪಿ. ಬಸವರಾಜು, ಮೈಸೂರು ಜಿಲ್ಲೆಯ ಪ್ರಾಣೇಶ್, ಹಾಸನದ ನಿರ್ವಾಣಿರಾವ್, ಮಂಗಳೂರಿನ ರಾಜು, ಕುಶಾಲನಗರದ ನಟರಾಜು ಮೊದಲಾದವರಿದ್ದರು. ಆರೋಗ್ಯ ಇಲಾಖೆಯಲ್ಲಿ ನಿವೃತ್ತಗೊಂಡ ಫಾರ್ಮಾಸಿಸ್ಟ್‍ಗಳಾದ ಪದ್ಮನಾಭ, ಗಣಪತಿ, ಹಾಲೇರಿ ಗಣಪತಿ, ನಾಣಯ್ಯ ಹಾಗೂ ಜಾರ್ಜ್ ಅವರನ್ನು ಗೌರವಿಸಲಾಯಿತು. ಸಿಂಚನಾ ಬಸವರಾಜ್ ಮತ್ತು ವರ್ಷಿತಾ ದಿನೇಶ್ ಸ್ವಾಗತ ನೃತ್ಯ ಮಾಡಿದರು.