ಪೆÇನ್ನಂಪೇಟೆ, ಫೆ. 24: ಕಳೆದ ಶನಿವಾರದಂದು ಬೆಳಿಗ್ಗೆ ನಾಲ್ವರು ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿದ ಹಾತೂರು ಜುಮಾ ಮಸೀದಿಗೆ ಮುಸ್ಲಿಂ ಸಮುದಾಯದ ಪ್ರಮುಖರು ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರ ನೇತೃತ್ವದ ಮುಸ್ಲಿಂ ಸಮುದಾಯದ ಪ್ರಮುಖರ ತಂಡ, ಮಸೀದಿ ಆವರಣವನ್ನು ಪರಿಶೀಲಿಸಿತು. ಅಲ್ಲದೆ ಹಲ್ಲೆಗೊಳಗಾದ ಹಾತೂರು ಜುಮಾ ಮಸೀದಿಯ ಮುಸ್ಲಿಯಾರ್ ಮೂಸ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ತಂಡದಲ್ಲಿ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ, ಪೆÇನ್ನಂಪೇಟೆ ಗ್ರಾ.ಪಂ. ಸದಸ್ಯ ಆಲೀರ ರಶೀದ್, ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ ಪದಾಧಿಕಾರಿಗಳಾದ ವಕೀಲ ಎಂ.ಎ. ಶಮೀರ್, ತನ್ವೀರ್ ಅಹ್ಮದ್, ಅಬ್ದುಲ್ ಸಮದ್, ಎಂ.ಎಂ. ರಶೀದ್ ಮತ್ತು ಹಾತೂರು ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎ.ಎಂ. ಹಂಸ ಮೊದಲಾದವರಿದ್ದರು.

ಪೊಲೀಸ್ ಅಧಿಕಾರಿಗಳ ಭೇಟಿ: ಜುಮಾ ಮಸೀದಿಗೆ ವೀರಾಜಪೇಟೆ ಉಪ ವಿಭಾಗದ ಡಿ.ವೈ.ಎಸ್ಪಿ. ಜಯಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಆವರಣವನ್ನು ಪರಿಶೀಲಿಸಿತು. ಅಲ್ಲದೆ ಅಪರಿಚಿತರಿಂದ ಹಲ್ಲೆಗೊಳಗಾದ ಹಾತೂರು ಜುಮಾ ಮಸೀದಿಯ ಮುಸ್ಲಿಯಾರ್ ಮೂಸ ಅವರಿಂದ ಮಾಹಿತಿ ಪಡೆದುಕೊಂಡರು. ಮಸೀದಿಗೆ ನುಗ್ಗಿದ್ದ ಅಪರಿಚಿತರ ಪೈಕಿ ಇಬ್ಬರು ಅರ್ಧ ತೋಳಿನ ಶರ್ಟ್ ಧರಿಸಿದ್ದು, ದೈಹಿಕ ಸದೃಡವಂತರಾಗಿದ್ದರು ಎಂದು ಮೂಸ ಮುಸ್ಲಿಯಾರ್ ಅವರು ಪೊಲೀಸರಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಇದೇ ವೇಳೆ ಮುಖ್ಯ ರಸ್ತೆ ಬದಿಯಲ್ಲೇ ಮಸೀದಿ ಇರುವುದರಿಂದ ಇಲ್ಲಿಗೆ ಉತ್ತಮ ಗುಣಮಟ್ಟದ ಸಿ.ಸಿ. ಕ್ಯಾಮರಾಗಳನ್ನು ಕೂಡಲೇ ಅಳವಡಿಸುವಂತೆ ಮಸೀದಿಯ ಪ್ರಮುಖರಿಗೆ ಡಿ.ವೈ.ಎಸ್ಪಿ. ಜಯಕುಮಾರ್ ಅವರು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಗಾಬರಿಪಡುವ ಅಗತ್ಯವಿಲ್ಲ.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಮಸೀದಿಯ ಮುಸ್ಲಿಯಾರ್ ಮತ್ತು ಆಡಳಿತ ಮಂಡಳಿಯವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಗೋಣಿಕೊಪ್ಪಲು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಕೆ.ಎನ್. ಸುರೇಶ್ ಬೋಪಣ್ಣ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಕಾಸರಗೋಡಿಗೆ ತಂಡ: ಅಪರಿಚಿತರು ಬಳಸಿದ್ದ ಇನ್ನೋವಾ ಕಾರಿನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಕೇರಳದ ಕಾಸರಗೋಡಿನ ಆರ್.ಟಿ.ಓ. ಕಚೇರಿಯಲ್ಲಿ ನೋಂದಣಿಯಾಗಿರುವ ಕುರಿತು ಮಾಹಿತಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದಕ್ಕಾಗಿ ಗೋಣಿಕೊಪ್ಪಲಿನ ಮೂವರು ಪೊಲೀಸ್ ಸಿಬ್ಬಂದಿಗಳ ತಂಡ ಕೇರಳದ ಕಾಸರಗೋಡಿಗೆ ತೆರಳಿದೆ ಎಂದು ತಿಳಿದುಬಂದಿದೆ.

ಖಂಡನೆ: ಹಾತೂರು ಮೊಹೀದ್ದೀನ್ ಜುಮಾ ಮಸೀದಿಯಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ (ಡಿ.ಸಿ.ಸಿ.) ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ಖಂಡಿಸಿದ್ದಾರೆ.