ಮಡಿಕೇರಿ, ಫೆ. 24: ಸುಂಟಿಕೊಪ್ಪದಿಂದ ಸೋಮವಾರಪೇಟೆಗೆ ಆಟೋರಿಕ್ಷಾವೊಂದರಲ್ಲಿ ಗಾಂಜಾ ಕೊಂಡೊಯ್ಯುತ್ತಿದ್ದ ಚಾಲಕನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮಕೈಗೊಂಡಿದ್ದಾರೆ.

ಸೋಮವಾರಪೇಟೆಯ ನಗರೂರು ಬಳಿ ಠಾಣಾಧಿಕಾರಿ ಶಿವಶಂಕರ್ ಹಾಗೂ ತಹಶೀಲ್ದಾರ್ ಗೋವಿಂದರಾಜ್ ಅವರುಗಳು ನಿಖರ ಮಾಹಿತಿ ಮೇರೆಗೆ, ಆಟೋರಿಕ್ಷಾ (ಕೆ.ಎ. 12-ಬಿ-3933)ದಲ್ಲಿ, ಆರೋಪಿ ಚಾಲಕ ಮಾದಾಪುರ ನಿವಾಸಿ ಎಂ.ಎ. ಇಮ್ರಾನ್ (26) ಎಂಬಾತ, 290 ಗ್ರಾಂ ಗಾಂಜಾವನ್ನು ಮಾರಾಟಗೊಳಿಸಲು ಯತ್ನಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ.

ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಯೊಂದಿಗೆ ಸಿಬ್ಬಂದಿಗಳಾದ ಪೊನ್ನಪ್ಪ, ಶಿವಕುಮಾರ್, ಮಧು, ಜಗದೀಶ, ಪ್ರವೀಣ್, ಸಂದೇಶ್, ಶಿವರಾಜ್, ಕೇಶವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.