ಮಡಿಕೇರಿ, ಫೆ. 24: ಕೆದಕಲ್: ಶ್ರೀ ಮಹಾದೇವ ಈಶ್ವರ. ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾ ಸಂಕಲ್ಪ ಗಂಗಾ ಪೂಜೆ ಪುಣ್ಯಾಹಃ, ಪಂಚಕಳಸ , ನವಗ್ರಹ ಪೂಜೆ , ಗಣಪತಿ ಹೋಮ , ನವಗ್ರಹ ಹೋಮ ಪೂರ್ಣಾಹುತಿ, ಮತ್ತು ಶ್ರೀ ಮಹಾದೇವ ಈಶ್ವರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ , ಮಹಾಮಂಗಳಾರತಿ ತೀರ್ಥಪ್ರಸಾದ ಮತ್ತು ಅನ್ನದಾನ ಏರ್ಪಡಿಸಲಾಗಿತ್ತು.

ಸಂಪಾಜೆ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಜರುಗಿತು. ತಾ 21 ರಾತ್ರಿ 9 ಗಂಟೆಯಿಂದ ಭಜನೆ, ಮಧ್ಯರಾತ್ರಿ ರಂಗಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು. ತಾ. 22 ಮಧ್ಯಾಹ್ನ 12.30 ರಿಂದ ಮಹಾಪೂಜೆ ಮತ್ತು ಸಮಾರಾಧನೆ ನಡೆಯಿತು.

ವೀರಾಜಪೇಟೆ: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಿವರಾತ್ರಿ ಉತ್ಸವದ ಅಂಗವಾಗಿ ತಾ. 21 ರಂದು ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆಗಳು ನಡೆದು ಶನೀಶ್ವರನಿಗೆ ರುದ್ರಾಭಿಷೇಕ, ರಾಹು ಕೇತುವಿಗೆ ಪೂಜಾ ಸೇವೆ, ನಾಗದೇವತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಡಿನ ಕ್ಷೇಮಕ್ಕಾಗಿ ದೇವರಿಗೆ ಮಹಾಪೂಜೆಯ ನಂತರ ಪ್ರಸಾದವಿನಿಯೋಗ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದೇವಾಲಯದ ಅಧ್ಯಕ್ಷ ಚೋಕಂಡ ರಮೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಇದ್ದರು. ಉತ್ಸವಕ್ಕೆ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದಲೂ ಭಕ್ತಾದಿಗಳು ಆಗಮಿಸಿದ್ದರು.

ಕುಶಾಲನಗರ: ಶಿವರಾತ್ರಿ ಅಂಗವಾಗಿ ಕುಶಾಲನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಕುಶಾಲನಗರದ ಮಹಾಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ರಾಜ್ಯಮಟ್ಟದ ಶಾಸ್ತ್ರೀಯ ನೃತ್ಯ ಸರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಚಾಲನೆ ನೀಡಿದರು. ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 15 ಸಾವಿರ ನಗದು, ದ್ವಿತೀಯ ಬಹುಮಾನ ರೂ. 10 ಸಾವಿರ, ತೃತೀಯ ಬಹುಮಾನ ರೂ. 7500 ಹಾಗೂ ರೂ. 2 ಸಾವಿರ ಮೊತ್ತದ ಎರಡು ಸಮಧಾನಕರ ಬಹುಮಾನ ಜೊತೆಗೆ ಆಕರ್ಷಕ ಟ್ರೋಫಿಗಳು, ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭ ಸಮಿತಿಯ ಪ್ರಮುಖರಾದ ಕೆ.ಎನ್.ದೇವರಾಜ್, ಕೆ.ಎಸ್.ನಾಗೇಶ್, ಡಿ.ವಿ.ರಾಜೇಶ್, ಚೆಲುವರಾಜ್, ದೇವಾಲಯ ಒಕ್ಕೂಟ ಸಮಿತಿಯ ಅಧ್ಯಕ್ಷ ಎಂ.ಕೆ.ದಿನೇಶ್ ಮತ್ತಿತರರು ಇದ್ದರು.

ಪಟ್ಟಣದ ಸುತ್ತಮುತ್ತ ವ್ಯಾಪ್ತಿಯ ಈಶ್ವರ ದೇವಾಲಯಗಳಲ್ಲಿ ದಿನವಿಡೀ ಹೋಮ, ಹವನಗಳು ನಡೆದವು. ಸೋಮೇಶ್ವರ ದೇವಾಲಯ, ಗಂಧದಕೋಟೆ ಬಳಿ ಈಶ್ವರ ದೇವಾಲಯ, ಅತ್ತೂರು ಪಂಚಲಿಂಗೇಶ್ವರ ದೇವಾಲಯ, ಹುದುಗೂರು ಉಮಾಮಹೇಶ್ವರ ದೇವಾಲಯ, ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ, ನೆರೆಯ ಕೊಪ್ಪ ಈಶ್ವರ ದೇವಾಲಯಗಳಲ್ಲಿ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಲಕ್ಷದೀಪೋತ್ಸವ ನಡೆಯಿತು. ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಗಣಪತಿ ಮತ್ತಿತರರು ಇದ್ದರು.

ಹುದುಗೂರು ಉಮಾಮಹೇಶ್ವರಿ ಕ್ಷೇತ್ರದಲ್ಲಿ ಕ್ಷೇತ್ರದ ಅಧ್ಯಕ್ಷ ಟಿ.ಎಂ.ಚಾಮಿ ಮತ್ತು ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು, ಜ್ಯೋತಿಷ್ಯ ಸಜಿ ಪಣಿಕ್ಕರ್ ಮತ್ತು ಅರ್ಚಕರು ಮಹಾ ಗಣಪತಿ ಹೋಮ, ಮೃತ್ಯುಂಜಯ ಹೋಮ, ರುದ್ರಾಭಿಷೇಕ ನೆರವೇರಿಸಿದರು. ಸಂಜೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಕುಶಾಲನಗರ ಸಮೀಪ ಕಾವೇರಿ ನದಿಯ ಮಧ್ಯಭಾಗದಲ್ಲಿ ಏಳುಹೊಳೆಯ ರಾಮಪ್ಪ ಗುಡಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲ ವ್ಯಾಪ್ತಿಯ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೂಡಿಗೆ : ಶ್ರೀ ಉಮಾಮಹೇಶ್ವರ ಕ್ಷೇತ್ರ ಸಮಿತಿ ಹುದುಗೂರು ಇವರ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಶ್ರೀ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ರುದ್ರ ಹೋಮ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಪೂಜಾ ಕೈಂಕರ್ಯವನ್ನು ಕೇರಳದ ಸಜಿ ತಂಡ ನೆರವೇರಿಸಿತು. ಉಮಾಮಹೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಅಲಂಕೃತವಾದ ಭವ್ಯ ಮಂಟಪ ಕುಳ್ಳಿರಿಸಿ ಹುದುಗೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಹುದುಗೂರು, ಕೂಡಿಗೆ ಕೂಡುಮಂಗಳೂರು ಮದಲಾಪುರ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ಕಾರ್ಯದರ್ಶಿ ಸುರೇಶ್ ಸಮಿತಿಯ ನಿರ್ದೇಶಕರು ಸರ್ವ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೂರೆನೂರು ಹೆಬ್ಬಾಲೆ ಕೂಡಿಗೆ ವ್ಯಾಪ್ತಿಯಲ್ಲಿ ಶಿವರಾತ್ರಿ ಹಬ್ಬಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಆಯಾ ಗ್ರಾಮದಲ್ಲಿರುವ. ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರ ಅಂಗವಾಗಿ ದೇವಾಲಯ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು.

ಕೂಡಿಗೆ: ತೂರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗದ್ದೆಹೊಸಳ್ಳಿ ಗ್ರಾಮದಲ್ಲಿರುವ ಶ್ರೀ ಶನೀಶ್ವರ ದೇವಾಲಯ ಆವರಣದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಸತ್ಯನಾರಾಯಣ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು. ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಶನಿದೇವÀರಿಗೆ ಅಲಂಕಾರ ವಿಶೇಷ ಪೂಜೆ ನಡೆದು, ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು.

ಕಂಬಿಬಾಣೆಯ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ತಳಿರು ತೋರಣ, ವಿವಿಧ ಬಗೆಯ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಿಗ್ಗೆಯಿಂದಲೇ ಬಿಲ್ವಪತ್ರೆ ಪೂಜೆ, ದೀಪಾರಾಧನೆ ನಂತರ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆಯನ್ನು ನೇರವೇರಿಸಲಾಯಿತು.

ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ನೂರಾರು ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಟಿಸಿಎಲ್ ಆನಂದ್, ಕೆ.ಎಸ್.ಭಟ್, ಪಳಂಗಪ್ಪ,ಅನಿಲ್, ರವಿ ಮತ್ತಿತರರು ಇದ್ದರು.

ಬೈತೂರಪ್ಪ ದೇವಾಲಯ: ಸಮೀಪದ ಕೊಡಗರಹಳ್ಳಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ ಹಾಗೂ ಶಿವಾರಾಧನೆ ನಡೆಸಲಾಯಿತು.ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಮೀಪದ ನಾಕೂರು ಶಿವ ದೇವಾಲಯ, ಕಂಬಿಬಾಣೆ ಶಿವ ದೇವಾಲಯ, ಹರದೂರು ಮಲ್ಲಿಕಾರ್ಜುನ ಕಾಲೋನಿಯ ಶಿವ ದೇವಾಲಯಗಳಲ್ಲಿ ಬೆಳಗಿನಿಂದಲೇ ಶಿವಾಪೂಜೆ ಭಜನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಭಕ್ತರಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಸಲಾಯಿತು.

ವೀರಾಜಪೇಟೆ: ಮಹಾಶಿವರಾತ್ರಿ ಪ್ರಯುಕ್ತ ವೀರಾಜಪೇಟೆ ತೆಲುಗರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ಮತ್ತು ಅಂಗಾಳಪರಮೇಶ್ವರಿ ದೇವಾಸ್ಥಾನ ವತಿಯಿಂದ ತಾ. 19 ರಿಂದ 22ರ ವರೆಗೆ ನಾಲ್ಕು ದಿನಗಳು ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ತಾ,19 ರಂದು ದ್ವಜಾಸ್ತಂಭ ಪೂಜೆಯೊಂದಿಗೆ ಉತ್ಸವ ಪ್ರಾರಂಭಗೊಂಡು. ತಾ,20 ರಂದು ತಳಿಗೆ ಮತ್ತು ಕಾವಲು ದೇವತೆಗಳ ಪೂಜೆಯ ನಂತರ ತಲಕಾವೇರಿಯಿಂದ ಶಕ್ತಿ ಆಹ್ವಾಹನೆ, ದೇವರಿಗೆ ಅಭಿಷೇಕ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಿತು. ತಾ,22 ರಂದು ಶ್ರೀ ಅಂಗಾಳಪರಮೇಶ್ವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ದೇವರಿಗೆ ಅಲಂಕಾರ ಪೂಜೆ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ 5 ಗಂಟೆಗೆ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ದೇವಾಲಯದಿಂದ ಮಹಿಳೆಯರು ನವಧಾನ್ಯಗಳ ಕುಂಭಹೊತ್ತು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯು ಕೇರಳದ ತ್ರಿಶೂರಿನ ವಿಶೇಷ ಪೌರಾಣಿಕ ವೇಷ ಭೂಷಣ ಹಾಗೂ ಚಿಟ್ಟೆನೃತ್ಯ, ಇತರ ಕಲಾತಂಡದೊಂದಿಗೆ ನಡೆಯಿತು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 20,21 ಮತ್ತು 22 ರಂದು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾಕಾರ್ಯಗಳು ನಡೆಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಮತ್ತು ಸದಸ್ಯರು ಸಕ್ರೀಯವಾಗಿ ಭಾಗವಹಿಸಿದ್ದರು. ವೇದಮೂರ್ತಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಅನ್ನ ಸಂತರ್ಪಣೆ ಕಾರ್ಯ ನಡೆಯಿತು.

ವೀರಾಜಪೇಟೆ: ಬಿಟ್ಟಂಗಾಲ ಗ್ರಾಮದ ಪೆಗ್ಗರಿಕಾಡಿನಲ್ಲಿ ನವೋದಯ ಯುವಕ ಸಂಘದ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸರ್ವ ಧರ್ಮ ಸಮನ್ವಯ ಮಹಾ ಶಿವರಾತ್ರಿ ಉತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜೆ. ಜವರೆಗೌಡ ಉದ್ಘಾಟಿಸಿದರು.

ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್. ಸುದೇಶ್ ಶಿವರಾತ್ರಿಯ ಜಾಗರಣೆಯ ವೈಜ್ಞಾನಿಕ ಮೌಲ್ಯವನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ನವೋದಯ ಯುವಕ ಸಂಘದ ಅಧ್ಯಕ್ಷ ಟಿ. ಎ. ಪ್ರದೀಶ್ ವಹಿಸಿದರು.

ವೇದಿಕೆಯಲ್ಲಿ ನವೋದಯ ಯುವಕ ಸಂಘದ ಕಾರ್ಯದರ್ಶಿ ಕೆ. ಎಂ. ಸುರೇಶ್, ಪುಚ್ಚಿಮಂಡ ಸಾಬಾ ಬೆಳ್ಯಪ್ಪ, ಎಸ್. ದೇವರಾಜ್, ತಾಲೂಕು ಪಂಚಾಯಿತಿ ಸದಸ್ಯ ಬಿ. ಎಂ. ಗಣೇಶ್, ಕೆ. ಕೆ. ಶಶಿಕುಮಾರ್, ಬಿ. ವಿ. ಹೇಮಂತ್ ಮತ್ತು ಹೆಚ್. ಎಂ. ಮೊಣ್ಣಪ್ಪ, ಓರಿಯನ್ ಕನ್‍ಸ್ಟ್ರಕ್ಷನ್ ಮಾಲೀಕರು ಚೆರಿಯಂಡ ಶರತ್, ಕುಟ್ಟಂದಿಯ ಗುತ್ತಿಗೆದಾರರಾದ ಹರೀಶ್, ಬಿ. ಎಸ್. ಮಂಜಪ್ಪ, ಖಜಾಂಚಿ ಕೆ. ಎಂ. ಸುಧೀಶ್ ಉಪಸ್ಥಿತರಿದ್ದರು. ಗೌತಮ್, ಗಪ್ಪು, ಸವಿತಾ ಪ್ರಾರ್ಥಿಸಿದರು. ನವೋದಯ ಯುವಕ ಸಂಘದ ಸದಸ್ಯ ವಿನೋದ್ ಪಿ. ಎನ್ ಸ್ವಾಗತಿಸಿದರು. ಅಜಿತ್ ಟಿ. ವಿ. ವಂದಿಸಿದರು. ಆಗಮಿಸಿದ ಸರ್ವರಿಗೂ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ಏರ್ಪಡಿಸಲಾಗಿತ್ತು. ಗ್ರಾಮೀಣ ಕ್ರೀಡಾಕೂಟದ ನಂತರ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ರಾತ್ರಿ ಜಾಗರಣೆ ಪ್ರಯುಕ್ತ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಪೆÇನ್ನಂಪೇಟೆ: ಸಮೀಪದ ದೇವರಪುರದಲ್ಲಿರುವ ಅಮೃತವಾಣಿ ವಿಶೇಷ ಮಕ್ಕಳ ಶಾಲೆಗೆ ಬಾಳೆಲೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಥ್ಯು ಅವರು ಭೇಟಿ ನೀಡಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಶಿವರಾತ್ರಿ ಪ್ರಯುಕ್ತ ಪ್ರತಿವರ್ಷ ವಿಶೇಷ ಮಕ್ಕಳಿಗಾಗಿ ಆಹಾರ ಸಾಮಗ್ರಿಗಳನ್ನು ನೀಡುವಂತೆ ಪ್ರಸಕ್ತ ಸಾಲಿನಲ್ಲಿಯೂ ಬಿ.ಎನ್.ಪ್ರಥ್ಯು ಅವರು ತಮ್ಮ ವೈಯಕ್ತಿಕ ಅನುದಾನದಲ್ಲಿ ಹಬ್ಬದ ಆಹಾರ ಸಾಮಗ್ರಿಗಳನ್ನು ನೀಡಿದರು. ಅಕ್ಕಿ, ಮೊಟ್ಟೆ, ಬೆಲ್ಲ, ಈರುಳ್ಳಿ, ಬೇಳೆ, ಸಕ್ಕರೆ, ಎಣ್ಣೆ, ತರಕಾರಿ ಮೊದಲಾದ ಆಹಾರ ಪದಾರ್ಥಗಳನ್ನು ಬಿ.ಎನ್.ಪ್ರಥ್ಯು ಅವರು ಶಾಲಾ ಆಡಳಿತ ಮಂಡಳಿ ನಿರ್ದೇಶಕರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಬಿ.ಎನ್.ಪ್ರಥ್ಯು ದೇವರಪುರ ಮುಖ್ಯರಸ್ತೆಯಿಂದ ಅಮೃತವಾಣಿ ವಿಶೇಷ ಮಕ್ಕಳ ಶಾಲೆ ಆವರಣದವರೆಗೆ ರಸ್ತೆ ಅಭಿವೃದ್ಧಿಗಾಗಿ ಶಾಲಾ ಆಡಳಿತ ಮಂಡಳಿ ಬೇಡಿಕೆ ಸಲ್ಲಿಸಿದ್ದು, ಪರಿಗಣಿಸಲಾಗುವುದು. ಸುಮಾರು 200 ಮೀಟರ್ ಉದ್ದದ ರಸ್ತೆ ಡಾಂಬರೀಕರಣಕ್ಕೆ ಮುಂದಿನ ಜಿ.ಪಂ. ಕ್ರಿಯಾ ಯೋಜನೆಯಡಿ ಈ ಕಾಮಗಾರಿಯನ್ನು ಸೇರಿಸಲಾಗುವುದು. ಇದಕ್ಕಾಗಿ ರೂ.2.5 ಲಕ್ಷ ಅನುದಾನ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಅಮೃತವಾಣಿ ವಿಶೇಷ ಮಕ್ಕಳ ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಜ್ಯೋತಿ ಲಾಲ್, ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮತ್ತು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ, ನಾಗರಿಕ ಪ್ರಮುಖರಾದ ಕೆ.ಸಿ. ನರೇಂದ್ರ, ಎಸ್.ವಿ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

ನಾಪೆÇೀಕ್ಲು: ಸಮೀಪದ ಪೇರೂರು ಇಗ್ಗುತ್ತಪ್ಪ ದೇವಳದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಪೂಜೆ ನೆರವೇರಿಸಲಾಯಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ಪೂಜೆ, ತುಲಾಭಾರ ಸೇವೆಗಳನ್ನು ಸಲ್ಲಿಸಿದರು. ನಂತರ ಅನ್ನಸಂತರ್ಪಣೆ, ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ, ದೇವರ ಉತ್ಸವ ಜರುಗಿತು. ದೇವಳದ ಅರ್ಚಕ ಗಿರೀಶ್ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.

ಸಾಧಕರಿಗೆ ಸನ್ಮಾನ

ಸಿದ್ದಾಪುರ : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವಕರ ಸಂಘದ ವತಿಯಿಂದ ನೆಲ್ಯಹುದಿಕೇರಿಯಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಮಾರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ನೆಲ್ಯಹುದಿಕೇರಿ ಗ್ರಾಮದ ಎ.ವಿ ಸಮೃದ್ಧಿ ಹಾಗೂ ರಾಷ್ಟ್ರ ಮಟ್ಟಕ್ಕೆ ಕ್ರೀಡೆಯಲ್ಲಿ ಆಯ್ಕೆಯಾದ ಕಾಮೆಯಂಡ ವರುಣ್ ಬೋಪಣ್ಣ ಹಾಗೂ ರಾಜ್ಯ ಮಟ್ಟದ ಒಲಂಪಿಕ್ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಪಡೆದ ಹಳೆಗದ್ದೆ ಬಿ. ಅದೋಕ್ಷ್, ಅಜೇಶ್ ನೆಲ್ಲಿಕಲ್, ಶ್ರೀ ಕುಮಾರ್ ಹಾಗೂ ಮಾಲ್ದಾರೆಯ ಚಂಡೆ ಕಲಾವಿದ ಶಾಜಿ ಶ್ರೀ ಮುತ್ತಪ್ಪ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಪಾಲಚಂಡ ಚೀಯಣ್ಣ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ರವೀಂದ್ರ, ದೇವಾಲಯ ಸಮಿತಿ ಅಧ್ಯಕ್ಷ ಪಿ.ಡಿ. ಚೀಯಣ್ಣ ಹಾಗೂ ಮುತ್ತಪ್ಪ ಯುವ ಕಲಾ ಸಂಘದ ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳಾದ ಸತೀಶ್, ನಾರಾಯಣ, ಪ್ರವೀಣ್ ಇನ್ನಿತರರು ಹಾಜರಿದ್ದರು. ದೇವಾಲಯದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದವರೆಗೆ ವಿವಿಧ ಭಜನಾ ಕಾರ್ಯಕ್ರಮಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳು ಜಾಗರಣೆ ಕುಳಿತರು. ಪದ್ಮನಾಭ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಬಿಂದು ಪ್ರಕಾಶ್ ನಿರೂಪಿಸಿದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಬಾಡಗ ಬಾಣಂಗಾಲದಲ್ಲಿ : ಮಾಲ್ದಾರೆಯ ಬಾಡಗ ಬಾಣಂಗಾಲ ಗ್ರಾಮದ ಸಮೀಪದ ಮೈಲಾಪುರ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಶ್ರೀ ಮಹಾ ಶಿವರಾತ್ರಿ ಮಹೋತ್ಸವ ನಡೆಯಿತು. ಗಣಪತಿ ಹೋಮ, ಗಂಗೆ ಪೂಜೆ ಹಾಗೂ ಮುತ್ತೂರಿನ ವೆಂಕಟಯ್ಯ, ಚಲುವಯ್ಯ ಮತ್ತು ತಂಡದ ಕೊಂಬು, ನಗಾರಿ, ತಮಟೆ, ಹಾಗೂ ಕೊಡಗಿನ ವಾದ್ಯಗೋಷ್ಠಿ: ಹರೀಶ್ ಮತ್ತು ತಂಡದವರಿಂದ ಚೆನ್ನಯ್ಯನಕೋಟೆ ನಾಗಸ್ವರ : ಆರ್.ಎಕ್ಸ್ ಬಾಸ್ಸ್ ಹುಣಸೂರು ಅವರಿಂದ ಡೊಳ್ಳು ನಗಾರಿ ಕುಣಿತ ನಡೆಯಿತು. ಶ್ರೀ ಸಿದ್ದಪ್ಪಾಜಿ ಮತ್ತು ದೊಡ್ಡಮ್ಮ ತಾಯಿಯವರ ಮೆರವಣಿಗೆ ಹೊರಟು ಪೂಜೆಯೊಂದಿಗೆ ದೇವಾಲಯಕ್ಕೆ ಕರೆ ತರಲಾಯಿತು. ಪ್ರಸಾದ ವಿನಿಯೋಗ. ಸಭಾಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ನೆಲ್ಲೀರ ಚರಣ್, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ಟಿ.ಎ. ರಾಣಿ, ಗ್ರಾ.ಪಂ. ಸದಸ್ಯರುಗಳಾದ ಎ.ಎ. ರಘು, ಟಿ.ಆರ್. ಸತೀಶ್ ಹಾಗೂ ಕಾಫಿ ಬೆಳೆಗಾರರಾದ ಎ.ಜಿ. ಪೂವಣ್ಣ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ ಹಾಗೂ ಗಣೇಶ್ ಭಾಗವಹಿಸಿದ್ದರು. ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ಝಕಾರ್ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಶನಿವಾರಸಂತೆ : ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮ ಶ್ರೀ ಗವಿಸಿದ್ದೇಶ್ವರಸ್ವಾಮಿಯ 32ನೇ ವರ್ಷದ ಜಾತ್ರಾಮಹೋತ್ಸವ ಕಾಡಾನೆಗಳ ಭೀತಿಯ ನಡುವೆಯೂ ಶ್ರದ್ಧಾಭಕ್ತಿಯಿಂದ ಜರುಗಿತು.

ಶ್ರೀ ಗವಿಸಿದ್ದೇಶ್ವರಸ್ವಾಮಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬದ ಮಾರನೇ ದಿವಸ ನಡೆಯುವ ಜಾತ್ರೆಗೆ, ಈ ಬಾರಿ ಕಾಡಾನೆಗಳ ಭೀತಿಯ ಛಾಯೆ ಆವರಿಸಿತ್ತು. ಬೆಟ್ಟದ ಮೇಲೆ ನಾಲ್ಕೈದು ಕಾಡಾನೆಗಳು ಗುಂಪಿನಲ್ಲಿ ಮೇವು ಅರಸಿ ಬರುವ ವಿಚಾರ ತಿಳಿದಿದ್ದರಿಂದ ಜಾತ್ರೆಯಲ್ಲಿ ವ್ಯಾಪಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಬೇಗನೆ ಜಾತ್ರೆ ಮುಗಿಸಿ ಹಿಂದಿರುಗಿದ್ದರು. ಏಕಶಿಲಾ ಬೃಹದಾಕಾರದ ಗವಿಯೊಳಗಿನ ಶ್ರೀ ಸಿದ್ದೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಹಣ್ಣುಕಾಯಿ, ಅಭಿಷೇಕ, ಮಹಾಮಂಗಳಾರತಿ ಸಮರ್ಪಣೆಯೊಂದಿಗೆ ಪೂಜಾ ವಿಧಿವಿಧಾನಗಳು ನಡೆದವು. ಆಗಳಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀಗವಿಸಿದ್ದೇಶ್ವರಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.