ಗೋಣಿಕೊಪ್ಪಲು, ಫೆ. 24: ಕೊಡಗಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.
ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ 6ನೇ ವರ್ಷದ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಡಗಲಪುರ ನಾಗೇಂದ್ರ ಕೊಡಗು ಜಿಲ್ಲೆಯಲ್ಲಿ ರೈತ ಸಂಘವು ಗಟ್ಟಿಯಾಗಿ ರುವುದರಿಂದ ಹಲವು ರೈತರ ಸಮಸ್ಯೆ ಗಳಿಗೆ ಪರಿಹಾರ ಸಿಕ್ಕಿದೆ. ಚಳುವಳಿ ಇನ್ನಷ್ಟು ಗಟ್ಟಿಗೊಳ್ಳಬೇಕು. ರೈತ ಸಂಘ ಕಟ್ಟಕಡೆಯ ನಾಗರಿಕನ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು ಎಂದರು.
ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದ ಜಾನುವಾರುಗಳು ಸಾಯುತ್ತಿರುವುದನ್ನು ಮನಗಂಡು ಹುಲಿ ಸೆರೆಗೆ ಹೋರಾಟ ಮಾಡಲಾಗಿದೆ. ಪರಿಣಾಮ ಹಿರಿಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಲು ಆದೇಶ ಪತ್ರ ನೀಡಿದ್ದಾರೆ. ಹೋರಾಟಕ್ಕೆ ಜಯ ಲಭಿಸಿದೆ ಎಂದರು. ರೈತರಲ್ಲಿ ಕುಟುಂಬ ಕಲಹಗಳು ಕಡಿಮೆಯಾಗಬೇಕು. ಸಂಘರ್ಷಕ್ಕೆ ಅವಕಾಶ ಆಗದಂತೆ ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸರ್ಕಾರ ರೈತರು ಬೆಳೆದ ಬೆಳೆÉಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದಲ್ಲಿ ಸಾಲ ಮನ್ನಾಕ್ಕೆ ನಾವು ಎಂದಿಗೂ ಹೋರಾಟ ಮಾಡುವುದಿಲ್ಲ ಎಂದರು.
ಸಂಘದ ಕಾನೂನು ಸಲಹೆಗಾರ ಹಿರಿಯ ರೈತ ಮುಖಂಡ ವಕೀಲ ಹೇಮಚಂದ್ರ ಮಾತನಾಡಿ ರೈತರ ಹೋರಾಟದಿಂದ ವಿಶೇಷವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರಿಂದ ರೈತರಿಗೆ ಸಿಗಬೇಕಾದ ಪರಿಹಾರಗಳು ಶರವೇಗ ದಲ್ಲಿ ಸಿಗಲು ಕಾರಣವಾಗಿದೆ ಎಂದರು.
ಹಿರಿಯ ರೈತ ಮುಖಂಡರಾದ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ ವಿದ್ಯುತ್ ಸಮಸ್ಯೆಯಿಂದಾಗಿ ಕಾಫಿ ಬೆಳೆಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡು ವಿದ್ಯುತ್ ನಿಲುಗಡೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ಮಂಡಿಸಿದರು. ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಲೆಕ್ಕಪತ್ರ ಮಂಡಿಸಿದರು. ಚೆಪ್ಪುಡೀರ ಕಾರ್ಯಪ್ಪ ಸ್ವಾಗತಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಖಜಾಂಜಿ ಇಟ್ಟಿರ ಸಬಿತ, ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಹೋಬಳಿ ಸಂಚಾಲಕರಾದ ಆಲೇಮಾಡ ಮಂಜುನಾಥ್, ಚಂಗುಲಂಡ ಸೂರಜ್, ಚಟ್ಟಂಗಡ ಕಂಬ ಕಾರ್ಯಪ್ಪ, ತಾಣಚ್ಚೀರ ಲೆಹರ್ ಬಿದ್ದಪ್ಪ, ಸುರೇಶ್ ಸುಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದ ನೂತನ ಸದಸ್ಯರು ಸೇರ್ಪಡೆ ಗೊಂಡರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರತಿಜ್ಞಾವಿಧಿ ಬೋಧಿಸಿದರು. ರೈತ ಮುಖಂಡರಾದ ತಿತಿಮತಿಯ ಮಹೇಶ್ ಕುಮಾರ್, ಟಿ. ಶೆಟ್ಟಿಗೇರಿಯ ಮೋಟಯ್ಯ, ಗಾಡಂಗಡ ಉತ್ತಯ್ಯ, ಪುಚ್ಚಿಮಾಡ ಕವಿತ, ಬೋಡಂಗಡ ಅಶೋಕ್, ಐಪುಮಾಡ ರೋನಿ, ಪುಚ್ಚಿಮಾಡ ರಾಯ್ ಬಿದ್ದಪ್ಪ, ಕಿರುಗೂರಿನ ಅಶೋಕ್, ಬಿರುನಾಣಿಯ ಕರ್ತಮಾಡ ಸುಜು ಮುಂತಾದವರು ಭಾಗವಹಿಸಿ ದ್ದರು. ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ಕುಟುಂಬವೊಂದಕ್ಕೆ ಅರಣ್ಯ ಅಧಿಕಾರಿ ಅನನ್ಯ ಕುಮಾರ್ ಪರಿಹಾರದ ಚೆಕ್ ವಿತರಿಸಿದರು. ಸಭೆಯಲ್ಲಿ ಎಂ.ಪಿ. ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.