ಶನಿವಾರಸಂತೆ, ಫೆ. 23: ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಜನತೆ ಅದರಿಂದ ಹೊರಬಂದು ಧಾರ್ಮಿಕ ಜೀವನವನ್ನು ಅಳವಡಿಸಿ ಕೊಳ್ಳಬೇಕು ಎಂದು ಪ್ರವಾದಿ ಪೈಗಂಬರ್ ಅವರ ಮೊಮ್ಮಗ ಕೇರಳದ ಸೈಯದ್ ಸಫ್ವಾನ್ ತಂಞಳ್ ಕರೆ ನೀಡಿದರು. ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ಸಂಶುಲ್ ಉಲಮಾ ಮೈದಾನದಲ್ಲಿ ಎಸ್.ಕೆ. ಎಸ್.ಎಸ್.ಎಫ್. ಕೊಡ್ಲಿಪೇಟೆ ಘಟಕದ ವತಿಯಿಂದ ನಡೆದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಯುವಕರು ತಾನು ತನ್ನ ಜೀವನ ಎಂಬ ಸ್ವಾರ್ಥವನ್ನು ಬದಿಗೊತ್ತಿ ಇತರರ ಬಾಳಿಗೂ ಬೆಳಕಾಗಿ ಮಾನವೀಯತೆ ಮೆರೆಯುತ್ತಾ ಉತ್ತಮ ಸಮಾಜಮುಖಿ ಜೀವನ ಸಾಗಿಸಬೇಕು ಎಂದರು.

ಸಮಾರಂಭದಲ್ಲಿ ಎಸ್.ಕೆ. ಎಸ್.ಎಸ್.ಎಫ್. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಮ್ಲೀಕ್ ಧಾರಿಮಿ, ನೂತನ ಖಜಾಂಚಿ ಸಿದ್ದೀಕ್ ಹಾಜಿ ಹಾಗೂ ಚಿಕ್ಕ ವಯಸ್ಸಿನಲ್ಲೇ ಕುರಾನ್ ಕಂಠಪಾಠ ಮಾಡಿದ ಉನೈಸ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಆರಿಫ್ ಫೈಝಿ, ಅಶ್ರಫ್ ಮಿಸ್ಬಾಹಿ, ನೂಫಿ ಧಾರಿಮಿ, ಹಸೈನಾರ್ ಫೈಝಿ, ಇಕ್ಬಾಲ್ ಮುಸ್ಲಿ ಯಾರ್, ಕರೀಮ್ ಮುಸ್ಮಿಯಾರ್, ಅಬ್ಬಾಸ್ ಹಾಜಿ, ಸುಲೈಮಾನ್, ಡಿ.ಎ. ಖಾದರ್, ಝಹೀರ್ ನಿಝಾಮಿ, ಹಾರೀಸ್ ಬಾಖವಿ ಮತ್ತಿತರರು ಉಪಸ್ಥಿತರಿದ್ದರು.