ಮಡಿಕೇರಿ, ಫೆ. 23: ಮಹಾಶಿವರಾತ್ರಿ ಪ್ರಯುಕ್ತ ಜಗದೀಶನಿಗೆ ವಿವಿಧೆಡೆಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳೊಂದಿಗೆ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಾಂಸ್ಕøತಿಕ ಚಟುವಟಿಕೆ, ಜಾಗರಣೆ ನಡೆದವು. ಸಾವಿರಾರು ಭಕ್ತರು ಅಲ್ಲಲ್ಲಿ ಮಹಾದೇವನ ಪೂಜೆಯೊಂದಿಗೆ ಅನುಗ್ರಹಕ್ಕೆ ಪಾತ್ರರಾದರು.

ಸಿದ್ಧಲಿಂಗಪುರ ಶ್ರೀಮಂಜುನಾಥ

ಸೋಮವಾರಪೇಟೆ: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸನ್ನಿದಿಯಲ್ಲಿ ಶಿವರಾತ್ರಿ ಅಂಗವಾಗಿ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್‍ಜೀ ಅವರ ನೇತೃತ್ವದಲ್ಲಿ ತಾ. 21ರ ಬೆಳಗ್ಗೆ 5 ಗಂಟೆಯಿಂದ ತಾ. 22ರ ಮಧ್ಯಾಹ್ನ 12 ಗಂಟೆಯವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ತಾ. 21 ರಂದು ಬೆಳಗ್ಗೆ 6 ಗಂಟೆಯಿಂದ ಶ್ರೀಮಂಜುನಾಥ ದೇವರಿಗೆ ಕ್ಷೀರಾಭಿಷೇಕ, 1275 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಳಶಾಭಿಷೇಕ, ಪಂಚಾಮೃತ ಅಭಿಷೇಕ, ಕಳಸಾಭಿಷೇಕ, ತಾ. 22ರ ರಾತ್ರಿ 12 ಗಂಟೆಯಿಂದ ಜೇನುತುಪ್ಪ ಅಭಿಷೇಕ, ಭಸ್ಮಾಭಿಷೇಕ, ರುದ್ರಹೋಮ, ಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ ಸೇವೆಗಳು ನೆರವೇರಿದವು.

ತಾ. 21ರ ರಾತ್ರಿಯಿಂದ ತಾ.22ರ ಬೆಳಗ್ಗಿನ ಜಾವದವರೆಗೂ ದೇವಾಲಯದಲ್ಲಿ ಜಾಗರಣೆ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಸಪ್ತನದಿಗಳ ತೀರ್ಥ ಸ್ನಾನ

ಶ್ರೀಮಂಜುನಾಥ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಶಿವರಾತ್ರಿ ಮಹೋತ್ಸವದಲ್ಲಿ ಸಪ್ತ ನದಿಗಳ ತೀರ್ಥದಿಂದ ಭಕ್ತಾದಿಗಳು ಪುಣ್ಯಸ್ನಾನ ಮಾಡಿದರು.

ಗಂಗೆ, ಕಾವೇರಿ, ಯಮುನೆ, ನರ್ಮದೆ, ಗೋದಾವರಿ, ಸರಸ್ವತಿ, ಸಿಂಧು ನದಿಗಳಿಂದ ತಂದಂತಹ ತೀರ್ಥವನ್ನು ದೇವಾಲಯದಲ್ಲಿ ನೆಲೆಯಾಗಿರುವ ಶ್ರೀಮಂಜುನಾಥಸ್ವಾಮಿಗೆ ಅಭಿಷೇಕ ಮಾಡಿ, ನಂತರ ಸಪ್ತ ನದಿಗಳ ತೀರ್ಥದಿಂದ ಭಕ್ತಾದಿಗಳಿಗೆ ಪುಣ್ಯಸ್ನಾನ ನೆರವೇರಿಸಲಾಯಿತು.

ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಯಿಂದಲೂ ಆಗಮಿಸಿದ್ದ ನೂರಾರು ಭಕ್ತಾದಿಗಳು ದೇವಾಲಯದಲ್ಲಿ ಪುಣ್ಯಸ್ನಾನ ಮಾಡಿದರು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್ ಸೇರಿದಂತೆ ಶ್ರೀಗಣಪತಿ ಯುವಕ ಸಂಘ, ಸ್ವಸಹಾಯ ಸಂಘದ ಸದಸ್ಯರುಗಳು ಜಾತ್ರೋತ್ಸವದ ಉಸ್ತುವಾರಿ ವಹಿಸಿದ್ದರು.

ಸೋಮೇಶ್ವರ ದೇವಾಲಯ

ಸೋಮವಾರಪೇಟೆ ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಏಕದಶ ರುದ್ರಾಭಿಷೇಕ, 121 ಕಳಸ ಪೂಜೆ, ರುದ್ರಪಾರಾಯಣ ನಡೆಯಿತು. ಸಂಜೆ ಹಾಸನ ತಾಲೂಕು ಅಂಜನೇಯಪುರದ ಲೋಕೇಶ್ ಮೂರ್ತಿ ತಂಡದಿಂದ ಹರಿಕಥೆ ನಡೆಯಿತು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ.ವಿಜೇತ್, ಖಜಾಂಚಿ ಎಸ್.ಎಂ. ಶ್ಯಾಮ್ ಮತ್ತಿತರು ಭಾಗವಹಿಸಿದ್ದರು.

ಗೌಡಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಮಾಲಂಬಿ ಬೆಟ್ಟದಲ್ಲಿರುವ ಮಳೆಮಲ್ಲೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹಿರಿಕರ, ಮಲ್ಲೇಶ್ವರ, ಕೂಗೂರು ಪಂಚಲಿಂಗೇಶ್ವರ, ಗೌಡಳ್ಳಿ ಹುಲಿ ಬಸವೇಶ್ವರ, ಬಸವನಕೊಪ್ಪ ಬಸವೇಶ್ವರ, ದೊಡ್ಡಮಳ್ತೆ ಹೊನ್ನಮ್ಮ ತಾಯಿ ದೇವಾಲಯ, ಕಿಬ್ಬೆಟ್ಟ ಈಶ್ವರ ದೇವಾಲಯ, ಸೋಮವಾರಪೇಟೆ ಬಸವೇಶ್ವರ, ಗಣಪತಿ, ಆಂಜನೇಯ, ಕುಳ್ಳಾರಿಗುಡಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ಗೌಡಳ್ಳಿ: ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ರಾತ್ರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ಕಾಸರಗೋಡಿನ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾವಿದರಿಂದ ದೇವಿ ಮಹಾತ್ಮೇ ಯಕ್ಷಗಾನ ಬಯಲಾಟ ನಡೆಯಿತು. ಶಿವರಾತ್ರಿ ಪ್ರಯುಕ್ತ ದೇವಾಲಯ ಆವರಣದಲ್ಲಿ ಉಚಿತ ಪಶುಚಿಕಿತ್ಸಾ ಶಿಬಿರ ನಡೆಸಲಾಯಿತು. ಯೂತ್ ಕ್ಲಬ್ ಹಿರಿಕರ, ಬೀಟಿಕಟ್ಟೆ ವತಿಯಿಂದ ಕ್ರಿಕೆಟ್ ಪಂದ್ಯಾಟಗಳು ನಡೆದವು.

ಗುಡ್ಡಗಾಡು ಓಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಆರ್. ಮುತ್ತಣ್ಣ, ಗೌಡಳ್ಳಿ ಗ್ರಾಪಂ ಅಧ್ಯಕ್ಷೆ ಜಿ.ವಿ.ನಾಗರತ್ನ, ತಾಪಂ ಸದಸ್ಯೆ ಕುಸುಮಾ ಅಶ್ವಥ್, ದೊಡ್ಡಮಳ್ತೆ ಗ್ರಾಪಂ ಅಧ್ಯಕ್ಷ ದಿವಾಕರ್, ಗೌಡಳ್ಳಿ ಕೃ.ಪ.ಸ.ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಪ್ರಮುಖರಾದ ಜಿ.ಎ.ಮಹೇಶ್, ಭರತ್ ಕುಮಾರ್, ಡಾ. ಇಂದೂಧರ್, ಡಾ.ಸತೀಶ್ ಕುಮಾರ್, ಸಿ.ಇ.ಒ. ಕೆ.ಕೆ. ಶಿವಪ್ರಕಾಶ್ ಮತ್ತಿತರರು ಇದ್ದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ಪಾರ್ವತಮ್ಮ ಅಣ್ಣಯ್ಯ, ಲೈನ್‍ಮನ್ ರಘು ಅವರುಗಳನ್ನು ಸನ್ಮಾನಿಸಲಾಯಿತು.

ತಣ್ಣೀರುಹಳ್ಳ ಬಸವೇಶ್ವರ, ಸುಬ್ರಮಣ್ಯ ದೇವಾಲಯದಲ್ಲಿ ಶುಕ್ರವಾರ ರಾತ್ರಿ ವಿಜೃಂಭಣೆಯ ಶಿವರಾತ್ರಿ ಆಚರಿಸಲಾಯಿತು. ಮಹಿಳೆಯರು ಕಳಸಹೊತ್ತು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ಶಿವರಾತ್ರಿ ಆಚರಿಸಲಾಯಿತು. 84 ದೀಪಗಳನ್ನು ಬೆಳಗಲಾಯಿತು. ತಹಸೀಲ್ದಾರ್ ಗೋವಿಂದರಾಜು, ಎಇಇ ಮೋಹನ್ ಕುಮಾರ್ ಇದ್ದರು. ಕರ್ಕಳ್ಳಿಯಲ್ಲಿ ಶಾಲಾ ಮಕ್ಕಳು ಶಿವ ಪಾರ್ವತಿಯ ವೇಷಭೂಷಣಗಳನ್ನು ತೊಟ್ಟು ಮನೆ ಮನೆಗೆ ತೆರಳಿ ಶಿವರಾತ್ರಿಯ ಮಹತ್ವನ್ನು ತಿಳಿಸಿದರು.

ರಾಮಲಿಂಗೇಶ್ವರ ಸನ್ನಿಧಿ

ಕಾವೇರಿ ನಿಸರ್ಗ ಧಾಮ ಬಳಿಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದಿಂಡುಗಾಡು ಬಸವ ಜ್ಯೋತಿ ಮಠದ ಪೀಠಾಧಿಪತಿ ಶ್ರೀ ಅಪ್ಪಾಜಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಪೂಜೋತ್ಸವದಲ್ಲಿ ದೊಡ್ಡಹೊಸೂರು ಶಿವಣ್ಣ ಅವರ ಮಕ್ಕಳಾದ ಮಂಜುನಾಥಸ್ವಾಮಿ, ಜಯಪರಮೇಶ್, ಕುಮಾರ್ ಸೋದರರು ಶಿವರಾತ್ರಿಯಂದು ಗ್ರಾಮಕ್ಕೆ ಬಂದು ಕಾವೇರಿ ನದಿಯೊಳಗೆ ಇರುವ ಶಿವಲಿಂಗದ ಸನ್ನಿಧಿಯನ್ನು ಸ್ವಚ್ಛಗೊಳಿಸಿ ಪೂಜಿಸುತ್ತಾ ಭಕ್ತರಿಗೆ ಅನ್ನಪ್ರಸಾದ ನೆರವೇರಿಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀಗಳು ಹೇಳಿದರು.

ಈ ಸಂದರ್ಭ ಕುಶಾಲನಗರ, ಗುಡ್ಡೆಹೊಸೂರು, ಕೊಪ್ಪ, ಚಿಕ್ಕಹೊಸೂರು, ದೊಡ್ಡ ಹೊಸೂರು ಮೊದಲಾದ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು. ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ. ಶಿವಪ್ಪ, ಪ್ರಮುಖರಾದ ಜಯಣ್ಣ, ರೇಣುಕಸ್ವಾಮಿ, ವಿಶ್ವನಾಥ, ಸೋಮಣ್ಣ, ಪುಟ್ಟರಾಜು, ಲೋಕೇಶ್, ಮಂಜುನಾಥ್, ಹೇಮಕುಮಾರ್, ವೃಷಭೇಂದ್ರಪ್ಪ ಮೊದಲಾದವರಿದ್ದರು.

ಗಿರಿಜೇಶ್ವರನಿಗೆ ಮಹಾ ಪೂಜೆ

ಕಣಿವೆ: ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದಲ್ಲಿರುವ ಶ್ರೀ ಗಿರಿಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ ನೆರವೇರಿತು. ಪಿರಿಯಾಪಟ್ಟಣದ ಪುಟ್ಟಸ್ವಾಮಿ ಶಾಸ್ತ್ರಿ ನೇತೃತ್ವದಲ್ಲಿ ದೇವರಿಗೆ ಅಭಿಷೇಕ ಹಾಗೂ ಪೂಜಾ ವಿಧಿಗಳು ಏರ್ಪಟ್ಟವು. ದೇವಾಲಯದ ಧರ್ಮದರ್ಶಿ ಬಿ.ನಟರಾಜು, ರೇಖಾ ನಟರಾಜು, ಸಂಗಮೇಶ್, ಶಿವಕುಮಾರ್, ಚನ್ನಬಸಪ್ಪ, ಪ್ರಭು, ವರುಣ್ ಮೊದಲಾದವರು ಇದ್ದರು. ಬಳಿಕ ಭಕ್ತಸಮೂಹಕ್ಕೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಚಂದ್ರಮೌಳೇಶ್ವರ ದೇವಾಲಯ

ಶನಿವಾರಸಂತೆ: ಪಟ್ಟಣದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರ ಗುಡಿ ಹಾಗೂ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ದೇವಾಲಯ ಆವರಣದಲ್ಲಿ ಹಣತೆಗಳನ್ನು ಬೆಳಗಿಸಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವರಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚಕ ಶೇಷಾಚಲ ಭಟ್ ನೇತೃತ್ವದಲ್ಲಿ ಶಿವನಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾರ್ಚನೆ ಇತ್ಯಾದಿ ಪೂಜಾ ವಿಧಿಗಳು ನೆರವೇರಿತು.

ಪೂಜಾ ಕೈಂಕರ್ಯದಲ್ಲಿ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಕೊಡ್ಲಿಪೇಟೆ: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾವಿಧಿಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ, ದೀಪಾರಾಧನೆ, ಪಂಚಾಮೃತ, ರುದ್ರಾಭಿಷೇಕ, ಕಲ್ಪೋಕ್ತ ಇತ್ಯಾದಿ ಪೂಜೆಗಳನ್ನು ಅರ್ಚಕ ಮಹಾಬಲೇಶ್ ನೆರವೇರಿಸಿದರು. ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ನೆಲ್ಯಹುದಿಕೇರಿಯಲ್ಲಿ

*ಸಿದ್ದಾಪುರ: ನೆಲ್ಯಹುದಿಕೇರಿಯ ಶ್ರೀಮುತ್ತಪ್ಪ ಯುವ ಕಲಾ ಸಂಘದ ವತಿಯಿಂದ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಮೂರನೇ ವರ್ಷದ ಮಹಾಶಿವರಾತ್ರಿ ಜಾಗರಣೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಂಜೆ ಕಾವೇರಿ ನದಿಯಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ನಂತರ ಚಂಡೆವಾದ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ದೇವಾಲಯದಲ್ಲಿ ಶ್ರೀಮುತ್ತಪ್ಪ ಪಯಂಗುತ್ತಿ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ಹೆಚ್ಚಿನ ಸಂಖ್ಯೆಯ ಭಕ್ತರು ಶಿವ ಆರಾಧನೆಯೊಂದಿಗೆ ಜಾಗರಣೆಯನ್ನು ಮಾಡಿದರು.

ಧಾರ್ಮಿಕ ಪ್ರವಚನ, ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ವಕೀಲ ಕೃಷ್ಣಮೂರ್ತಿ ಹಾಗೂ ಕಾವಾಡಿಯ ಪುರೋಹಿತ ರಾಮಚಂದ್ರ ಭಟ್, ಯುವ ಕಲಾ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಸುರೇಶ್, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.

ದೇವಾಲಯದ ಅಧ್ಯಕ್ಷ ಪಾಲಚಂಡ ಚೀಯಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿನಿ ಒಲಿಂಪಿಕ್ಸ್‍ನಲ್ಲಿ ಮಿಂಚಿದ ಬಾಲಕರುಗಳಾದ ಕೂಡುಗದ್ದೆ ನಿವಾಸಿ ಶಶಿ, ರೀನಾ ದಂಪತಿ ಪುತ್ರ ಕುಮಾರ್, ಬೆಟ್ಟದಕಾಡು ನಿವಾಸಿ ಸುರೇಶ, ರೇಖಾ ದಂಪತಿ ಪುತ್ರ ಅಜೆಯ್ ನೆಲ್ಲಿಕಲ್, ಹಳೆಗದ್ದೆಯ ಭಾನುಪ್ರಕಾಶ್, ಶಿಲ್ಪ ದಂಪತಿ ಪುತ್ರ ಅಧೋಕ್ಷ್ ಅವರುಗಳನ್ನು ಸನ್ಮಾನಿಸಲಾಯಿತು. ಭಕ್ತರಿಗೆ ಅನ್ನದಾನದ ಕಲ್ಪಿಸಲಾಗಿತ್ತು.

ಗುಡ್ಡೆಹೊಸೂರು: ಸುಣ್ಣದಕೆರೆ ಗ್ರಾಮದಲ್ಲಿ ಶಿವರಾತ್ರಿಯ ಮರು ದಿನ ಗ್ರಾಮದ ಶ್ರೀ ಮುನೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ನಡೆದು ಸರ್ವಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದÀರ್ಭ ಗ್ರಾ.ಪಂ. ಸದಸ್ಯರಾದ ನಾರಾಯಣ ಮತ್ತು ಕವಿತಾ, ದೇವಸ್ಥಾನ ಸಮಿತಿಯ ಅಧ್ಯಕ್ಷ ಪೊನ್ನಪ್ಪ, ಅರ್ಚಕ ಬಾಬು, ಗೋಪಾಲ, ವೆಂಕಪ್ಪ ಮುಂತಾದವರು ಹಾಜರಿದ್ದರು.