ಭಾಗಮಂಡಲ, ಫೆ. 23: ಚೆಟ್ಟಿಮಾನಿಯ ಪದಕಲ್ಲು ಗ್ರಾಮದ ಭಗವತಿ ದೇವಸ್ಥಾನದ ಪುನರ್‍ಪ್ರತಿಷ್ಠೆ ಮತ್ತು ಅಷ್ಟಬಂಧ ಕಲಶಾಭಿಷೇಕ ತಾ. 26 ರಿಂದ 28 ರವರೆಗೆ ಮೂರು ದಿನಗಳ ಕಾಲ ಜರುಗಲಿದೆ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ತಿಳಿಸಿದೆ. ತಾ. 26 ರಂದು ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪುನರ್‍ಪ್ರತಿಷ್ಠೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು ರಕ್ಷೋಘ್ನ ಹೋಮ ವಾಸ್ತುಬಲಿ ನೆರವೇರಲಿದೆ.

ತಾ. 27ರಂದು ಬೆಳಿಗ್ಗೆ 8ಗಂಟೆಗೆ ಗಣಪತಿ ಹೋಮ, ಬಿಂಬಶುದ್ದಿ, ಅನುಜ್ಞಾ ಕಲಶ ಪೂಜೆ ಜೀವ ಕಲಶಪೂಜೆಗಳು ಜರುಗಲಿವೆ.ಸಂಜೆ ಆರು ಗಂಟೆಗೆ ಕುಂಭೇಶ, ಕರ್ಕರಿ, ಕಲಶ ಪೂಜೆ, ಅದಿವಾಸ ಹೋಮ, ದ್ರವ್ಯ ಕಲಶ ಪೂಜೆ, ಪರಿಕಲಶಪೂಜೆ, ಮತ್ತು ಕಲಶಾಧಿವಾಸ ಜರುಗಲಿದೆ. ತಾ. 28ರಂದು ಬೆಳಿಗ್ಗೆ 6ಗಂಟೆಯಿಂದ ಗಣಪತಿ ಹೋಮ, ಶ್ರೀಭಗವತಿ ಸಾನಿಧ್ಯ, ಪುನರ್‍ಪ್ರತಿಷ್ಟೆ, ಅಷ್ಟಬಂಧ ಲೇಪನ, ಶ್ರೀ ಜೀವ ಕಲಶಾಭಿಷೇಕ ಶಾಂತಿ ಹೋಮ, ಪ್ರತಿಷ್ಟಾ ಹೋಮ, ದ್ರವ್ಯ ಕಲಶಾಭಿಷೇಕ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದ್ದು ಬಳಿಕ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ.

ಸುಮಾರು 800 ವರ್ಷಗಳ ಹಿಂದೆ ಭಗವತಿದೇವಿಯು ಪದಕಲ್ಲು ಗ್ರಾಮದಲ್ಲಿ ನೆಲೆನಿಂತಿದ್ದು ಗ್ರಾಮದ ತಕ್ಕರು ಕಾವುಕಾರರು, ಗ್ರಾಮಸ್ಥರು ಸೇರಿ ಈಗಿನ ದೇವಾಲಯದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ 14ರಿಂದ 20ರ ವರೆಗೆ ಉತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ ದೇವಾಲಯದ ಗರ್ಭಗುಡಿ, ತೀರ್ಥಮಂಟಪ, ನಾಗನಕಲ್ಲು, ಶಾಸ್ತಾವು ಸನ್ನಿಧಿ ಶಿಥಿಲಾವಸ್ಥೆಯಲ್ಲಿರುವುದರಿಂದ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲು ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತೀರ್ಮಾನಿಸಿ; ಜೀರ್ಣೋದ್ಧಾರ ಕೈಗೊಂಡಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.