ಮಡಿಕೇರಿ, ಫೆ. 23: ಇತ್ತೀಚೆಗೆ ಮೂರ್ನಾಡು ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಲ ಸಂರಕ್ಷಣೆ, ಸದ್ಭಳಕೆ, ಮರು ಪೂರೈಕೆ, ಅಂತರ್ಜಲ ಗುಣಮಟ್ಟ, ಮಳೆನೀರು ಸಂಗ್ರಹಣೆ ಹಾಗೂ ತೆರೆದ-ತ್ಯಕ್ತ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಜಾಗೃತಿ ಶಿಬಿರವನ್ನು ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ಮಡಿಕೇರಿ ಇವರಿಂದ ಆಯೋಜಿಸಲಾಯಿತು.

ಶಿಬಿರದ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಕಾಳ ಅಂತರ್ಜಲ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಉಪನಿರ್ದೇಶಕರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ನೀರಿನ ಸದ್ಭಳಕೆ ಬಗ್ಗೆ ಅರಿವು ನೀಡಿ, ಮಳೆ ನೀರನ್ನು ಭೂಮಿಗೆ ಇಂಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಟಿ.ಎನ್. ಗಾಯತ್ರಿ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಹಾಗೂ ಗುಣಮಟ್ಟ ದಿನೇ ದಿನೇ ಕ್ಷೀಣಿಸುತ್ತಿದೆ. ಆದ್ದರಿಂದ ಮಾನವಕುಲ ಹಾಗೂ ಜೀವಸಂಕುಲದ ಒಳಿತಿಗಾಗಿ ನಾಗರಿಕರಾಗಿ ಎಲ್ಲರೂ ಪರಿಸರ ಸಂರಕ್ಷಣೆ ಹಾಗೂ ನೆಲ, ಜಲ ಸಂರಕ್ಷಣೆಗಾಗಿ ದುಡಿಯುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಕೆ.ಜಿ. ಸೌಮ್ಯ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ನೆಲ, ಜಲ, ಪರಿಸರ ಸಂರಕ್ಷಣೆ ಮಾಡುವುದನ್ನು ತಮ್ಮ ಜೀವನದಲ್ಲಿ ಮಹೋನ್ನತ ಮೌಲ್ಯವಾಗಿಸಿಕೊಂಡು ಪ್ರತಿನಿತ್ಯದ ಚಟುವಟಿಕೆಯ ಭಾಗವಾಗಿ ಪರಿಗಣಿಸಿದರೆ ಮಾತ್ರ ಪರಿಸರ ಹಾಗೂ ಜಲ ಸಂರಕ್ಷಣೆ ಮಾಡಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾದ ಬಟ್ಟೆಯ ಬ್ಯಾನರ್ ಉಪಯೋಗಿಸಲಾಯಿತಲ್ಲದೆ ಆಹ್ವಾನಿತರಿಗೆ ಹೂವಿನ ಗಿಡಗಳನ್ನು ನೀಡಲಾಯಿತು.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ಪರಿಸರಕ್ಕೆ ಹಾನಿಕರವಾಗಿರುವುದರಿಂದ ಪ್ಲಾಸ್ಟಿಕ್ ಬಾಟಲ್ ತ್ಯಜಿಸಲು ಮನವಿ ಮಾಡಿ, ವಿದ್ಯಾರ್ಥಿಗಳಿಗೆ, ಆಹ್ವಾನಿತರಿಗೆ ಹಾಗೂ ಶಿಕ್ಷಕರಿಗೆ ನೀರಿನ ಸ್ಟೀಲ್ ಬಾಟಲ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಪಿ. ಗುರುರಾಜ್, ಇಕೋ ಕ್ಲಬ್ ಸಂಚಾಲಕ ಎಂ. ಪ್ರಣವಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.