ಮಡಿಕೇರಿ, ಫೆ. 23: ಕುಡಿಯಲು ಕಲುಷಿತ ನೀರು.., ವಾಸ್ತವ್ಯಕ್ಕೆ ಟಾರ್ಪಲ್ ಮನೆ.., ವಿದ್ಯುತ್ ಇಲ್ಲದೆ ಕತ್ತಲಲ್ಲಿ ದಿನ ದೂಡುವ ನಿವಾಸಿಗಳು.., ಆದರೂ ಸ್ವಚ್ಛವಾಗಿ ಕಾಣುವ ಹಾಡಿ!

ಹೌದು, ಇದು ವೀರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಹಾಡಿಯ ಚಿತ್ರಣ. ಹಲವಾರು ಸಮಸ್ಯೆಗಳ ನಡುವೆಯೂ ಇಲ್ಲಿನ ಹಾಡಿ ನಿವಾಸಿಗಳು ಸ್ವಚ್ಛಂದದಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ನೆಲೆ ಕಂಡುಕೊಂಡಿರುವ ಇವರು ಸರ್ಕಾರದಿಂದ ಮನೆ ನಿರ್ಮಿಸಿಕೊಡಬಹುದೆಂಬ ಮಹದಾಸೆಯಲ್ಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕ ಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ ಏಳು ದಿನಗಳ ಕಾಲ ವೀರಾಜಪೇಟೆ ತಾಲೂಕಿನ ಹುದೂರುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಅಧ್ಯಯನ ಶಿಬಿರ ನಡೆಯಿತು. ಅಲ್ಲಿ ನಾವು ಕಂಡಂತಹ ಅಚ್ಚರಿಯ ವಿಷಯ ಇಲ್ಲಿದೆ.

ಶಾಲೆಯಲ್ಲಿ ಏಳು ದಿನಗಳ ಕಾಲ ವಿವಿಧ ರೀತಿಯ ಅಧ್ಯಯನ ವಿಷಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಗ್ರಾಮದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಗ್ರಾಮ ಸಮೀಕ್ಷೆಯನ್ನು ನಡೆಸಲಾಗಿತ್ತು. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಂಡಂತಹ ಅಚ್ಚರಿಯ ವಿಷಯವೇನೆಂದರೆ ಸಾಮಾಜಿಕ ವ್ಯವಸ್ಥೆಗಳಾದಂತಹ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ವಸತಿ, ರಸ್ತೆ ಹಾಗೂ ಚರಂಡಿ ವ್ಯವಸ್ಥೆಗಳು ಇಲ್ಲದಿದ್ದರೂ ಸಹ ಹಳ್ಳಿಗಟ್ಟು ಪ್ರದೇಶದಲ್ಲಿನ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸುಂದರವಾಗಿ ರಚಿಸಿಕೊಂಡಿದ್ದಾರೆ.

ಹುದೂರು ಹಳ್ಳಿಗಟ್ಟು ಹಾಡಿ ನಿವಾಸಿಗಳು ಬಾವಿಯ ನೀರನ್ನು ಕುಡಿಯುವ ಸಲುವಾಗಿ ಬಳಸುತ್ತಿದ್ದರು. ಆದರೆ ಕುಡಿಯುವ ನೀರಿಗೆ ಬಾವಿಯ ನೀರು ಯೊಗ್ಯವಾಗಿರಲಿಲ್ಲ. ಹಳ್ಳಿಗಟ್ಟು ಪ್ರದೇಶದ ಮಧ್ಯದಲ್ಲಿ ಸರ್ಕಾರವು ಕಸವನ್ನು ಹಾಕುವ ಸಲುವಾಗಿ ಒಂದು ದೊಡ್ಡ ಸಭಾಂಗಣವನ್ನು ನಿರ್ಮಿಸಲಾಗಿದೆ. ಅಲ್ಲಿ ಹಾಕುವ ಕಸವು ಕರಗಿ ಬಾವಿಯ ನೀರಿನಲ್ಲಿ ಸೇರುತ್ತಿದ್ದುದರಿಂದ ಬಾವಿಯ ನೀರು ತುಂಬಾ ಕಲುಷಿತವಾಗಿತ್ತು. ಇದೀಗ ಕಸವನ್ನು ಹಾಕದಿದ್ದರೂ ಬಾವಿಯ ನೀರು ಕಲುಷಿತವಾಗಿದೆ. ಅಲ್ಲಿನ ಜನರು ಹಾಗೂ ಮಕ್ಕಳು ಬಾವಿಯ ನೀರನ್ನು ಕುಡಿಯಲು ಬಳಸುತ್ತಿದ್ದಾರೆ.

ಹಳ್ಳಿಗಟ್ಟು ಹಾಡಿ ಪ್ರದೇಶವು ಮರಳಿನಿಂದ ಕೂಡಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಹಾಡಿಯ ಕೊಳಚೆ ನೀರು ನಿಲ್ಲದ ರೀತಿ ಒಂದು ಚರಂಡಿಯನ್ನು ಹಾಡಿಗಳ ನಿವಾಸಿಗಳೇ ತೆಗೆದಿದ್ದಾರೆ. ಮತ್ತು ಟಾರ್ಪಲಿನಿಂದ ಅಂಗನವಾಡಿಯೊಂದನ್ನು ನಿವಾಸಿಗಳೇ ರಚಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಹಾಡಿಯ ಜನರು ತಮ್ಮ ಹಾಡಿಯನ್ನು ಸುಂದರವಾಗಿ ಮಾರ್ಪಡಿಸಿದ್ದಾರೆ. ಸುಂದರವಾದ ಹಾಡಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಿದರೆ ಒಂದು ಮಾದರಿ ಹಳ್ಳಿಗಟ್ಟು ಹಾಡಿಯನ್ನು ನೋಡಬಹುದು.

ಎನಿಲ್ಲವಾದರೂ ಹುದೂರಿನ ಹಳ್ಳಿಗಟ್ಟು ಹಾಡಿ ನಿವಾಸಿಗಳು ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ನೀಡಿದÀ ಪ್ರೀತಿ ಮರೆಯಲಾಗದು. ಹುದೂರಿನ ಹಳ್ಳಿಗಟ್ಟು ಹಾಡಿ ನಿವಾಸಿಗಳಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಸಿಗಬೇಕೆಂಬದು ಸಮಾಜಕಾರ್ಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಆಶಯ.

-ಇಂದ್ರಾಣಿ ಬಿ.ಕೆ., ಪ್ರಥಮ ಎಂಎಸ್‍ಡಬ್ಲ್ಯೂ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ