ಸುಂಟಿಕೊಪ್ಪ, ಫೆ. 23: ಸಮೀಪದ ಮಾದಾಪುರ ರಸ್ತೆಯಲ್ಲಿರುವ ಕೆಂಚಟ್ಟಿ ಎಂಬಲ್ಲಿ ಬಿದ್ದು ಸಿಕ್ಕಿದ್ದ ಬ್ಯಾಗೊಂದನ್ನು ಆಟೋ ಚಾಲಕರೊಬ್ಬರು ವಾರೀಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಸುಂಟಿಕೊಪ್ಪ ಆಟೋ ಚಾಲಕ ಷೇಕ್ ಹುಸೇನ್ ಎಂಬವರು ಗರಗಂದೂರಿನಿಂದ ಸುಂಟಿಕೊಪ್ಪದತ್ತ ಪ್ರಯಾಣಿಕರನ್ನು ಕರೆ ತರುತ್ತಿದ್ದ ಸಂದರ್ಭ ಕೆಂಚಟ್ಟಿ ಬಳಿಯ ರಸ್ತೆ ಬದಿಯಲ್ಲಿ ಬ್ಯಾಗೊಂದು ಬಿದ್ದಿರುವುದು ಗೋಚರಿಸಿದೆ. ಅದನ್ನು ತೆಗೆದುಕೊಂಡು ನೇರವಾಗಿ ಸುಂಟಿಕೊಪ್ಪಕ್ಕೆ ಬಂದ ಅವರು ಇಲ್ಲಿನ ಸ್ಟುಡಿಯೋ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬ್ಯಾಗಿನಲ್ಲಿ ರೂ. 2,870 ನಗದು, ಮೌಲ್ಯಯುತವಾದ ದಾಖಲೆ ಪತ್ರಗಳು ಹಾಗೂ ಬ್ಯಾಗ್ ಕಳೆದುಕೊಂಡಿದ್ದ ಹರದೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಲಕ್ಷ್ಮಣ ಅವರ ಭಾವಚಿತ್ರ ಮತ್ತು ವಿಳಾಸ ಇರುವುದು ಕಂಡುಬಂದಿದೆ.
ಬಳಿಕ ಲಕ್ಷ್ಮಣ್ ಅವರಿಗೆ ಷೇಕ್ ಹುಸೇನ್ ಬ್ಯಾಗನ್ನು ಹಿಂತಿರುಗಿಸಿದ್ದಾರೆ. ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.