ಸೋಮವಾರಪೇಟೆ,ಫೆ.23: ತಾಲೂಕಿನ ಮಾದಾಪುರ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 2.19 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು.ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಕಡೆಯಿಂದ ತೆರಳುವ ರಸ್ತೆ, ಕಾರೇಕಾಡು ಹೊಳೆ ಬದಿ ರಸ್ತೆ ನಿರ್ಮಾಣ, ಎಸ್.ಜೆ.ಎಂ. ಶಾಲಾ ಮುಂಭಾಗದ ರಸ್ತೆ, ಇಗ್ಗೋಡ್ಲು ಗ್ರಾಮ ರಸ್ತೆ, ಜಂಬೂರು ರಸ್ತೆ, ಕುಂಬೂರು ಪೈಸಾರಿ ರಸ್ತೆ, ಮೂವತ್ತೊಕ್ಲು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ, ಇಗ್ಗೋಡ್ಲು ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ರೂ.71ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.ಇದರೊಂದಿಗೆ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಮೊಟ್ಟೆ-ಕಲ್ಯಾಡಿ ರಸ್ತೆ ದುರಸ್ತಿ, ನಂದಿಮೊಟ್ಟೆ-ಕಿರುದಾಲೆ ರಸ್ತೆ ನಿರ್ಮಾಣ, ಕೋಟೆಬೆಟ್ಟ ರಸ್ತೆ ದುರಸ್ತಿ, ಗರ್ವಾಲೆ ಗ್ರಾಮದ ಓಡಿಯಂಡ ಕುಟುಂಬಸ್ಥರ ಮನೆ ಕಡೆ ತೆರಳುವ ರಸ್ತೆ,ಶಿರಂಗಳ್ಳಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ರಸ್ತೆ ದುರಸ್ತಿ, ಗೋರ್‍ಮಣ್‍ಗದ್ದೆ ರಸ್ತೆ ನಿರ್ಮಾಣ, ಅಪ್ಪುಡ ರಸ್ತೆ ನಿರ್ಮಾಣ ಸೇರಿದಂತೆ ನಂದಿಮೊಟ್ಟೆ-ಕಿರುದಾಲೆ ರಸ್ತೆಯಲ್ಲಿರುವ ಸೇತುವೆ ದುರಸ್ತಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಒಟ್ಟು 148 ಲಕ್ಷದ ರಸ್ತೆ ಕಾಮಗಾರಿಗಳಿಗೆ ಶಾಸಕ ರಂಜನ್ ಭೂಮಿ ಪೂಜೆ ನೆರವೇರಿಸಿದರು.(ಮೊದಲ ಪುಟದಿಂದ) ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಸುಭಾಷ್, ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಮಾದಾಪುರ ಗ್ರಾ.ಪಂ. ಸದಸ್ಯ ಉಮೇಶ್, ಅಬ್ದುಲ್ ಮಜೀದ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ರತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.