ಚೆಟ್ಟಳ್ಳಿ, ಫೆ. 23: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕುಶಾಲನಗರದ ನಿವಾಸಿಯಾದ ಜಾಬೀರ್ ಅವರ 2 ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಸುದ್ದಿಯಾಗಿತ್ತು.
ಈ ವಿಚಾರಕ್ಕೆ ಸ್ಪಂದಿಸಿರುವ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಎಂಬ ಸಂಸ್ಥೆ ಮಾನವೀಯತೆ ಮೆರೆದಿದೆ. ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ 25000 ರೂಪಾಯಿಗಳ ಧನ ಸಹಾಯವನ್ನು ನೀಡಲಾಯಿತು.
ಸಂಸ್ಥೆಯ ಕೊಡಗು ಜಿಲ್ಲಾಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ, ಜಿಲ್ಲೆಯಾದ್ಯಂತ ಸಂಸ್ಥೆಯ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸಂಬಂಧ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಹಾಯ ಮಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನೊಂದವರಿಗೆ ಸಹಾಯ ಹಸ್ತ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು. ಸಂಸ್ಥೆಯ ಪ್ರಮುಖರಾದ ಎಂ.ಹೆಚ್. ಮೊಹಮ್ಮದ್, ಫತಾಹ್ ಕಡಂಗ, ಮಜೀದ್ ಚೋಕಂಡಹಳ್ಳಿ, ನಾಸಿರ್ ಪಾಲಿಬೆಟ್ಟ, ರಫೀಕ್ ವೀರಾಜಪೇಟೆ ಉಪಸ್ಥಿತರಿದ್ದರು.