ಗೋಣಿಕೊಪ್ಪ ವರದಿ, ಫೆ. 23: ಮಾನವ ಕಳ್ಳ ಸಾಗಣೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದು ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಅಭಿಪ್ರಾಯಪಟ್ಟರು. ಇತ್ತೀಚೆಗೆ ಇಲ್ಲಿನ ಕಾವೇರಿ ಪದವಿ ಕಾಲೇಜು ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ಮಹತ್ವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುತ್ತಿರುವ ಮಾನವ ಕಳ್ಳ ಸಾಗಣೆಯ ಬಗ್ಗೆ ಎಲ್ಲಾರೂ ಜಾಗೃತರಾಗಬೇಕಿದೆ. ಇದರ ತಡೆಗೆ ಜನರ ಸಹಕಾರ ಹೆಚ್ಚಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು ಮಹಿಳೆಯರು ಹೆಚ್ಚು ಜಾಗೃತರಾಗುವಂತೆ ಸಲಹೆ ನೀಡಿದ್ದು, ಜೆಸಿಐ ಪೊನ್ನಂಪೇಟೆ ಗೋಲ್ಡನ್ ನಿಕಟಪೂರ್ವ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ಮಾತನಾಡಿ, ಪಾಲಕರು ಮತ್ತು ಮಕ್ಕಳ ನಡುವಿನ ಅಂತರದಿಂದ ಬಾಂಧವ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಕೌಟುಂಬಿಕ ಸಮಸ್ಯೆ ಹೆಚ್ಚಾಗುತ್ತಿದೆ. ಬಾಂಧವ್ಯ ಬೆಸೆಯಲು ಕುಟುಂಬದ ಪ್ರತಿಯೊಬ್ಬರು ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಕೆ.ಟಿ. ಸೀತಮ್ಮ, ಉಪನ್ಯಾಸಕರಾದ ಎ.ಎಸ್. ಮಾದಯ್ಯ, ಸಿ.ಟಿ. ಕಾವ್ಯ ಉಪಸ್ಥಿತರಿದ್ದರು.