ಕಣಿವೆ, ಫೆ. 23 : ಇತ್ತೀಚಿನ ಕೆಲವು ದಿನಗಳಿಂದ ಅಂದರೆ ನದಿ ನೀರಿನ ಪ್ರವಾಹದಿಂದ ನಷ್ಟ ಅನುಭವಿಸಿದ ಕೆಲವರಿಂದ ನದಿ ಹೂಳು ತೆಗೆಯಿರಿ ಎಂದು ಜಿಲ್ಲಾಡಳಿತಕ್ಕೆ ಬೇಡಿಕೆ ಇಟ್ಟಿರುವ ಬೆಳವಣಿಗೆ ನಡೆದಿದೆ. ಅಂದರೆ ಕಾವೇರಿ ನದಿಯಲ್ಲಿ ಹೂಳು ತುಂಬಿದೆ. ಇದರಿಂದಾಗಿಯೇ ಪ್ರತೀ ವರ್ಷದ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಹರಿವ ನೀರು ಪ್ರವಾಹದ ರೂಪ ತಳೆದು ನಮ್ಮ ಮನೆಗಳನ್ನು ತೋಯುತ್ತಿದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾಳಾಗುತ್ತಿದೆ. ನಮಗೆ ಶಾಶ್ವತವಾದ ನೆಮ್ಮದಿ ಬೇಕಿದೆ. ಇದಕ್ಕಾಗಿಯೇ ಕಾವೇರಿ ನದಿಯಲ್ಲಿ ತುಂಬಿರುವ ಹೂಳು ತೆಗೆಯಬೇಕಿದೆ ಎಂಬುದು ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸವಿರುವ ಜನರ ಹೊಸದಾದ ಪ್ರಸ್ತಾಪ. ಕಾವೇರಿ ಮಾತ್ರವಲ್ಲ ನಾಡಿನಲ್ಲಿ ಹರಿದಿರುವ, ಹರಿಯುತ್ತಲೇ ಇರುವ ಹಾಗೂ ಹರಿವನ್ನು ಸ್ಥಗಿತಗೊಳಿಸಿರುವ ಇನ್ನೂ ಅನೇಕ ನದಿಗಳ ಯಾವ ನದಿಗಳ ಹೂಳನ್ನು ತೆಗೆಯಿರಿ ಎಂಬ ಪ್ರಸ್ತಾಪ ಇದೂವರೆಗೂ ಯಾವುದೇ ಸರ್ಕಾರದ ಮುಂದೆ ಬಂದಿಲ್ಲ. ಹಾಗೆಯೇ ಇದೂ ಕೂಡ ಇಲ್ಲಿ ಅಪ್ರಸ್ತುತವೇ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಕಾವೇರಿ ನದಿಯಲ್ಲಿ ಕಳೆದ ಮೂರು ದಶಕಗಳ ಹಿಂದೆ ಸ್ವಾಭಾವಿಕ ವಾಗಿ ಉತ್ಪತ್ತಿಯಾಗುತ್ತಿದ್ದ ಮರಳು ರಾಶಿ ಅಲ್ಲಿನ ನೀರನ್ನು ನೈಸರ್ಗಿಕವಾಗಿಯೇ ಸ್ವಚ್ಛಗೊಳಿಸುತ್ತಿತ್ತು. ಅಂದರೆ ನದಿ ತೀರದಲ್ಲಿ ಈ ಹಿಂದೆ ಇದ್ದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನಬಳಕೆಯ ತ್ಯಾಜ್ಯ ನೀರು ನೇರವಾಗಿ ನದಿಯೊಳಗೆ ಹರಿಯುತ್ತಿತ್ತು. ಆದರೆ ನದಿಯೊಳಗೆ ತುಂಬಿ ತುಳುಕಿ ರಾಶಿ ರಾಶಿಯಾಗಿ ಬಿದ್ದಿದ್ದ ಮರಳ ರಾಶಿ, ಆ ತ್ಯಾಜ್ಯ ನೀರನ್ನು ಕ್ಷಣಾರ್ಧದಲ್ಲಿ ಸ್ವಚ್ಛಗೊಳಿಸುವ ಸ್ವಾಭಾವಿಕ ಶಕ್ತಿಯನ್ನು ಆ ನದಿ ಅಂದು ಹೊಂದಿತ್ತು.
ಆದರೆ ಇಂದು ಆ ನದಿ ಹಾಗೂ ನದಿಯ ಪರಿಸರ ಸಂಪೂರ್ಣ ಹಾಳಾಗಿದೆ.