ಸೋಮವಾರಪೇಟೆ,ಫೆ.23: ‘ವಿಶಿಷ್ಟ ಸಂಸ್ಕøತಿಯನ್ನು ಹೊಂದಿರುವ ಅರೆಭಾಷೆ ಸಂಸ್ಕøತಿ, ಭಾಷೆಯನ್ನು ಉಳಿಸಲು ಹೋರಾಟ-ಪ್ರತಿಭಟನೆಗಳು ಬೇಡ;ಎಲ್ಲರೂ ತಮ್ಮ ಮನೆಯಲ್ಲಿ ಅರೆಭಾಷೆಯನ್ನು ಅಭಿಮಾನದಿಂದ ಮಾತನಾಡಿದರಷ್ಟೇ ಸಾಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಿಸಿದರು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಆಲೂರು ಸಿದ್ದಾಪುರದ ಅರೆಭಾಷೆ ಗೌಡ ಸಮಾಜ, ಅರೆಭಾಷೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಆಶ್ರಯದಲ್ಲಿ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರದಲ್ಲಿ ಆಯೋಜಿಸಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಎನ್ನುವದು ಸಮಾಜದ ಅಡಿಗಲ್ಲು. ಯಾವದೇ ಸಮಾಜದ ಸಂಸ್ಕøತಿ, ಸಂಸ್ಕಾರಕ್ಕೆ ಭಾಷೆಯೇ ಮೂಲ. ದೇಶದಲ್ಲಿ ಒಂದೊಂದು ಸಮುದಾಯ, ಭಾಗಕ್ಕೆ, ರಾಜ್ಯಕ್ಕೆ ಒಂದೊಂದು ಭಾಷೆಗಳಿವೆ. ಪ್ರತಿಯೊಂದು ಸಮುದಾಯಗಳೂ ಅವರವರ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು. ತಾವು ಹುಟ್ಟಿಬಂದ ಸಮುದಾಯಕ್ಕೆ ನಮ್ಮಿಂದ ಗೌರವ ದೊರಕುವಂತಾಗಬೇಕು ಎಂದರು.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಸ್ಮಾರ್ಟ್ ಸಿಟಿಯ ಕಲ್ಪನೆ ಹೊಂದಿದ್ದರು. ವಿಶ್ವ ಮಾನವ ಕಲ್ಪನೆಯನ್ನು ಜಗತ್ತಿಗೆ ಕೊಟ್ಟಿದ್ದೇ ಗೌಡ ಸಮುದಾಯದ ಕುವೆಂಪು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ, ಕೆಂದಂಬಾಡಿ ರಾಮಗೌಡ ಹೋರಾಡಿದ್ದಾರೆ. ಮಠಗಳಿಗೆ ಮಾದರಿಯಾಗಿ ಆದಿಚುಂಚನಗಿರಿ ಇದೆ. ಹೀಗೆ ಗೌಡ ಸಮಾಜವು ದೇಶದ ವಿವಿಧ ರಂಗಗಳಿಗೆ ಕೊಡುಗೆ ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಮುಖ್ಯಮಂತ್ರಿ-ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಆಗಿದ್ದ ಸಂದರ್ಭ ಕೇವಲ ಮೂರೇ ದಿನದಲ್ಲಿ ಅಕಾಡೆಮಿ ಸ್ಥಾಪನೆ ಮಾಡಲಾಯಿತು. ಅರೆಭಾಷೆ ಸಂಸ್ಕøತಿಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸುವ ಕೆಲಸವನ್ನು ಅಕಾಡೆಮಿ ಮಾಡಬೇಕು ಎಂದು ಸದಾನಂದಗೌಡ ಹೇಳಿದರು.

ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ 65 ಎಕರೆಯಲ್ಲಿ ಅರೆಭಾಷೆ ಸಂಸ್ಕøತಿ ಗ್ರಾಮ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. 100 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಸಂಸ್ಕøತಿ, ಸಮಾಜದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ದೊರಕಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು, ಸಣ್ಣಭಾಷೆಗಳು ನಶಿಸುತ್ತಿರುವ ಸನ್ನಿವೇಶದಲ್ಲಿ ಅರೆಭಾಷೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ. ಅರೆಭಾಷೆಯಲ್ಲಿ ಉತ್ತಮ ಸಾಹಿತ್ಯ, ಕಾವ್ಯಗಳು ಮೂಡಿಬರಬೇಕು. ಸಮ್ಮೇಳನಗಳು ಸ್ಪೂರ್ತಿಯ ಜಾಗ. ಸುಗಮ ಸಂಗೀತದಲ್ಲೂ ಭಾಷೆಯ ಬಳಕೆಯಾಗಬೇಕು. ಹೊಸ ಪ್ರಯೋಗ ಮಾಡಬೇಕು. ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಜನಾಂಗ ಬಾಂಧವರು ಇದ್ದಾರೆ. ಆದರೆ ಕಲೆ, ಸಾಹಿತ್ಯ, ನಾಟಕಗಳಲ್ಲಿ ಕಡಿಮೆಯಿದ್ದಾರೆ. ಅರೆಭಾಷೆಯ ಯುವ ಸಮುದಾಯ ಈ ಕ್ಷೇತ್ರಗಳತ್ತಲೂ ಮನಸ್ಸು ಮಾಡಬೇಕು. ಸಮುದಾಯ ಭವನ ಮದುವೆ ಬೀಗರೂಟಕ್ಕೆ ಸೀಮಿತವಾಗದೇ ಸಾಹಿತ್ಯಕ್ಕೆ ಒತ್ತುಕೊಡುವ ಕ್ಷೇತ್ರಗಳಾಗಬೇಕು ಎಂದರು.

ಪುಸ್ತಕ ಬಿಡುಗಡೆ ಮಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಣ್ಣ ಸಣ್ಣ ಜನಾಂಗದ ಆಚಾರ ವಿಚಾರಗಳನ್ನು ಉಳಿಸುವ ಕೆಲಸ ಸರ್ಕಾರದಿಂದಲೂ ಆಗಬೇಕಿದೆ. ದೇಶದಲ್ಲಿ 13 ಸಾವಿರಕ್ಕಿಂತಲೂ ಹೆಚ್ಚು ಜನಾಂಗವಿದೆ. ಅರೆಭಾಷೆ ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಬೇಕು. ಹೊರ ರಾಜ್ಯ, ದೇಶಗಳಲ್ಲೂ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಕ್ರಮ ಆಗಬೇಕು ಎಂದರು.