ಕಣಿವೆ, ಫೆ. 22: ಗ್ರಾಮೀಣ ಪ್ರದೇಶಗಳಲ್ಲಿನ ರೈತಾಪಿ ಹುಡುಗರಿಗೆ ವಿವಾಹ ಮಾಡಿಕೊಳ್ಳಲು ಹುಡುಗಿಯರೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಯಾವ ದರ್ಜೆಯದಾದರೂ ಪರವಾಗಿಲ್ಲ ಅವ ಸರ್ಕಾರದ ಸಂಬಳ ಪಡೆಯೋ ಹಂಗಿದ್ದರೆ ಮಾತ್ರ ಕಳಿಸಿ ಎಂದು ವಿವಾಹ ವೇದಿಕೆಯ ಮದ್ಯವರ್ತಿಗಳಿಗೆ ಹೆಣ್ಣು ಹೆತ್ತ ಪಾಲಕರೇ ಮುಲಾಜಿಲ್ಲದೇ ಹೇಳುತ್ತಿದ್ದಾರೆ. ಕುಶಾಲನಗರದ ಸಮೀಪದ ಗ್ರಾಮವೊಂದರಲ್ಲಿ ವಿವಾಹಕ್ಕೆ ಸಿದ್ದವಾಗಿರುವ 15 ಹುಡುಗರು ಇದ್ದು ಕೇವಲ ಏಕೈಕ ಹುಡುಗಿ ಇದ್ದಾಳೆ. ಅಂದರೆ ಯಾವ ಗ್ರಾಮಗಳಿಗೆ ತೆರಳಿ ವಿಚಾರಿಸಿದರೂ 18 ರಿಂದ 23 ರ ವಯೋಮಾನದ ಹುಡುಗಿಯರೇ ಸಿಗುತ್ತಿಲ್ಲ. ಅಂದರೆ ಹೆಣ್ಣು ಮಕ್ಕಳ ಸಂಖ್ಯೆ ತೀರಾ ಅಂದರೆ ತೀರಾನೆ ವಿರಳ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಒಂದು ವಿಚಾರ ಅರಿವಿಗೆ ನಿಲುಕುತ್ತದೆ. ಅಂದರೆ ಕಳೆದ 18 ರಿಂದ 20 ವರ್ಷಗಳ ಹಿಂದೆ ವರದಕ್ಷಿಣೆ ಪಿಡುಗಿಗೆ ಪೀಡಿತರಾಗಿದ್ದ ಅದೆಷ್ಟೋ ಮಂದಿ ತಾಯಿಯ ಗರ್ಭವನ್ನು ಪರೀಕ್ಷಿಸಿ ಹೊಟ್ಟೆಯೊಳಗೆ ಏನಾದರೂ ಹೆಣ್ಣು ಮಗು ಎಂದು ಖಚಿತವಾದರೆ ಗರ್ಭಪಾತ ಮಾಡಿಸುವ ಹೀನಪದ್ಧತಿ ಇತ್ತು. ಅದರ ಪರಿಣಾಮವೇ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಅಂದು ಸಮಾಜದಲ್ಲಿದ್ದ ಗರ್ಭಪಾತದ ವಿರುದ್ಧ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಮರವನ್ನೇ ಸಾರಿದ ಮೇಲೂ ಆ ಪೀಡೆ ತೆರೆಮರೆಯಲ್ಲಿ ಕೆಲ ವರ್ಷ ಮುಂದುವರೆದಿತ್ತು. ನಂತರದ ಹದಿನೈದು ವರ್ಷಗಳ ಈಚೆಗೆ ಸರ್ಕಾರಗಳು ಹೆಣ್ಣು ಮಕ್ಕಳಿಗೆ ಹಲವು ಘೋಷಣೆಗಳನ್ನು ಘೋಷಿಸಿದ ನಂತರ ಗರ್ಭಪಾತ ಶಾಶ್ವತವಾಗಿ ನಿಲುಗಡೆಯಾಯಿತು. ಅಂದು ಮೂರ್ನಾಲ್ಕು ವರ್ಷಗಳ ಕಾಲ ನಡೆದ ಗರ್ಭಪಾತದ ಘೋರ ಪರಿಣಾಮವೇ ಇಂದು ಹೆಣ್ಣು ಮಕ್ಕಳ ಕೊರತೆಗೆ ಕಾರಣವಾದ ಅಂಶವಾಗಿದೆ ಎನ್ನಲಾಗುತ್ತಿದೆ. ಇನ್ನು ಹೆಣ್ಣು ಹೆತ್ತ ಹಲವರು ತಮ್ಮ ಮಗಳನ್ನು ನೌಕರಸ್ತನಿಗೆ ಕೊಟ್ಟು ವಿವಾಹ ಮಾಡಬೇಕು ಎಂಬ ಅಲಿಖಿತ ಶಾಸನವನ್ನು ತಮ್ಮ ಮೇಲೆ ತಾವೇ ವಿಧಿಸಿಕೊಂಡಿರುವ ಪರಿಣಾಮ ವಿದ್ಯಾವಂತ ಕೃಷಿಕ ಯುವಕರಿಗೆ ಹಾಗೂ ಪಕ್ಕಾ ಕೃಷಿಕರಿಗೆ ಹೆಣ್ಣುಗಳೇ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮವೊಂದರಲ್ಲಿನ ಈ ಹದಿನೈದು ಮಂದಿಗೂ ಜೀವನ ನಡೆಸಲು ಅಡ್ಡಿಯಾಗದಂತಹ ಉತ್ತಮವಾದ ನೀರಾವರಿ ಭೂಮಿಯೂ ಇದೆ. ಆ ಭೂಮಿಯನ್ನು ನಂಬಿ ಆ ಊರಿನ ಹುಡುಗರು ದುಡಿಯುತ್ತಿದ್ದಾರೆ. ಆದರೆ ಈ ಹುಡುಗರು ವಿವಾಹ ಜೀವನಕ್ಕೆ ಕಾಲಿಡಲೆಂದು ನಿರ್ಧರಿಸಿ ಕಳೆದ ನಾಲ್ಕಾರು ವರ್ಷಗಳಿಂದ ಸೂಕ್ತ ಹುಡುಗಿಯರ ಶೋಧದಲ್ಲಿ ತೊಡಗಿದ್ದಾರೆ. ಆದರೆ ಅವರು ಯಾವ ಊರಿಗೆ ಹೋಗಿ ವಿಚಾರಿಸಿದರೂ ಕೂಡ ಅಲ್ಲಲ್ಲಿ ಬೆರಳೆಣಿಕೆಯಷ್ಟು ಇರುವ ಹೆಣ್ಣು ಮಕ್ಕಳ ಪಾಲಕರು ನಿಮ್ಮ ಕೃಷಿ, ನಿಮ್ಮ ಕೃಷಿಯ ಆದಾಯ ನಮಗೆ ಬೇಡ. ಸರ್ಕಾರಿ ಸಂಬಳ ಪಡೆಯುತ್ತಿದ್ದರೆ ಮಾತ್ರ ಹುಡುಗಿಯನ್ನು ನೋಡಲು ಬರಲಿ ಎಂದು ಮುಲಾಜಿಲ್ಲದೆ ಹೇಳುತಿದ್ದಾರೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯ ತಾಯಿ ಬೇರಾದ ಗ್ರಾಮ ಸಂಸ್ಕೃತಿ ಎಲ್ಲಿಗೆ ಬಂದು ತಲುಪಿದೆ ಎಂದು ಯೋಚಿಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಅವಿವಾಹಿತ ಹುಡುಗರು ಸಿಲುಕಿದ್ದಾರೆ. ಕೆಲವು ಯುವಕರಿಗೆ 25 ವರ್ಷವಿದ್ದರೆ ಕೆಲವರು 30 ವರ್ಷ ದಾಟಿದವರೂ ಇದ್ದಾರೆ. ತನ್ನ ಅಪ್ಪ ಮಾಡಿದ ಭೂಮಿಯಲ್ಲಿ ಉಳುಮೆ ಮಾಡಿ ಭತ್ತ ಬೆಳೆದು ನಾಡಿನ ಜನರಿಗೆ ಅನ್ನ ನೀಡುವ ರೈತನಿಗೆ ಹಾಗು ಆ ರೈತನ ಮಕ್ಕಳಿಗೆ ಬಂದಿರುವ ಈ ದುಸ್ಥಿತಿಗೆ ಏನನ್ನಬೇಕು. ವರ್ಷವಿಡೀ ದುಡಿದು ದುಡಿದು ಹಣ್ಣಾದ ಅನೇಕ ರೈತರ ಮಕ್ಕಳು ಸಂಪ್ರದಾಯಸ್ಥ ಕುಟುಂಬದಲ್ಲಿ ಹೆಣ್ಣು ಹುಡುಕಿ ಮದುವೆಯಾಗೋದು ಹಿಮಾಲಯ ಪರ್ವತ ಏರಿಳಿದಷ್ಟು ತ್ರಾಸವಾಗುತ್ತಿದ್ದು, ಹೀಗಾದರೆ, ಯುವಕರಿಗೆ ಕೃಷಿಯ ಕಡೆ ಆಸಕ್ತಿ ಭವಿಷ್ಯದಲ್ಲಿ ಉಳಿಯುತ್ತದೆಯೇ ಎಂಬುದು ಇಲ್ಲಿ ಯಕ್ಷ ಪ್ರಶ್ನೆ. ಈ ದೇಶದ ಭವಿಷ್ಯ ಹಾಗೂ ಅಭ್ಯುದಯ ಗ್ರಾಮೀಣ ಪ್ರದೇಶಗಳ ಮಣ್ಣಿನ ಮಕ್ಕಳ ಕೈಯಲ್ಲಿದೆ. ರೈತ ಸಂತೃಪ್ತಿಯಾಗಿದ್ದರೆ ಇಡೀ ನಾಡು ಸಂತೃಪ್ತಿ. ಯುವಕರು ಪೇಟೆ-ಪಟ್ಟಣಗಳಿಂದ ಊರುಗಳಿಗೆ ಮರಳಿ ಕೃಷಿಯತ್ತ ಒಲವು ಬೆಳೆಸಿಕೊಳ್ಳಬೇಕೆಂದು ಸರ್ಕಾರಗಳು ಪ್ರತೀ ವರ್ಷ ಆಶಯ ವ್ಯಕ್ತಪಡಿಸುತ್ತಾ ಒಂದಷ್ಟು ಪ್ರಯೋಜನಗಳ ತುಪ್ಪವನ್ನು ರೈತನ ಮುಖಕ್ಕೆ ಸವರುತ್ತಿವೆ. ಆದರೆ ರೈತ ಹಾಗೂ ಆತನ ಕುಟುಂಬ ಅನುಭವಿಸುತ್ತಿರುವ ನರಕ ಯಾತನೆಗಳ ವಾಸ್ತವತೆ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಯಾರದೋ ಓರ್ವ ಅಧಿಕಾರಿಯ ಮರ್ಜಿನಲ್ಲಿ ಕೆಲಸ ಮಾಡಿ ತಿಂಗಳ ಸಂಬಳ ಪಡೆಯುವ ನೌಕರನಿಗಿಂತ ಈತನೇ ಸಾಮ್ರಾಟನಾಗಿ ತಾನು ಬೆಳೆದದ್ದೇ ಬೆಳೆ, ಗಳಿಸಿದ್ದೇ ಆದಾಯ ಎಂದು ಹೆಗಲ ಮೇಲಿನ ಟವಲನ್ನು ಒಮ್ಮೆ ಕೊಡಕಿ ರಾಜನಂತೆ ದುಡಿದು ದೇಶಕ್ಕೆ ಅನ್ನ ಹಾಗೂ ದವಸ ಧಾನ್ಯಗಳನ್ನು ನೀಡುವ ರೈತನಿಗೆ ರಾಜ ಮರ್ಯಾದೆ ಸಿಗಬೇಕಿದೆ. ಹಾಗಾಗಬೇಕಾದರೆ ವಿದ್ಯಾವಂತ ತರುಣಿಯರು ಒಮ್ಮೆ ಕುಳಿತು ಯೋಚಿಸಿ ನಾನು ಕೃಷಿಕನನ್ನೇ ವಿವಾಹವಾಗುತ್ತೇನೆ ಎಂದು ನಿರ್ಧರಿಸುವ ದಿನಗಳು ಎದುರಾಗಬೇಕು. ಹಾಗೆಯೇ ಹೆಣ್ಣು ಹೆತ್ತ ಪಾಲಕರು ಕೂಡ ಸರ್ಕಾರಿ ಸಂಬಳ ಪಡೆಯೋ ನೌಕರಿಗಿಂತ ಭೂಮಿ ತಾಯಿಯನ್ನು ನಂಬಿ ದುಡಿಮೆ ಮಾಡಿದಾಗ ಆ ತಾಯಿ ನೀಡುವ ಆದಾಯವೇ ಸಾಕೆಂಬ ನಿರ್ಧಾರಕ್ಕೆ ಬರುವ ಕಾಲ ಸನ್ನಿಹಿತವಾಗಬೇಕು. ಏಕೆಂದರೆ ಓರ್ವ ವಿದ್ಯಾವಂತ ನಿರುದ್ಯೋಗಿ ಯುವಕ ತಾತ ಮುತ್ತಾತ ಬಳುವಳಿಯಾಗಿ ನೀಡಿದ ಭೂಮಿಯನ್ನು ನಂಬಿ ದುಡಿಮೆ ಮಾಡುವಾಗ ನನ್ನ ಮಗಳು ಆ ಮನೆಯಲ್ಲಿ ಕೂಲಿಯವರಿಗೆ ರೊಟ್ಟಿ ಬೇಯಿಸಬೇಕಾ...? ದಿನವೂ ಬಿಡುವಿಲ್ಲದ ಆ ಕೃಷಿಯ ಬೆನ್ನತ್ತುವ ಕೃಷಿಕ ಕುಟುಂಬಕ್ಕೆ ನನ್ನ ಮಗಳನ್ನು ಕೊಡಬೇಕಾ ? ಎಂದು ತೋರುವ ಹಮ್ಮು ಬಿಮ್ಮು ನಿಲ್ಲಬೇಕು. ಗ್ರಾಮಗಳಲ್ಲಿ, ಅದರಲ್ಲೂ ಗ್ರಾಮಗಳ ಆ ತೋಟ, ಗಿಡ ಮರಗಳು, ಕೆರೆ ಕಟ್ಟೆಗಳ ಹಂದರದ ನಡುವೆ ಭೂಮಿಯಲ್ಲಿ ದುಡಿದು ತಿನ್ನುವ ಆ ಆರೋಗ್ಯಮಯ ಪರಿಸರದ ಜೀವನ ಪೇಟೆಗಳಲ್ಲಿ ಎಲ್ಲಿಂದ ಬರಬೇಕು. ದೀರ್ಘಾಯುಷ್ಯ ಹಾಗೂ ದೀರ್ಘಾ ರೋಗ್ಯಕ್ಕೆ ಹಳ್ಳಿಯ ಪರಿಸರ ಈ ಸೃಷ್ಟಿಯ ಕೊಡುಗೆ ಎಂಬ ಸತ್ಯವನ್ನು ಎಲ್ಲರು ಅರಿತಾಗ ಗ್ರಾಮೀಣ ಪರಿಸರ, ಕೃಷಿಯ ಬದುಕಿಗೆ ಒಗ್ಗಿಕೊಂಡವರ ಬದುಕು ಹಸನಾಗುತ್ತದೆ. ಒಂದು ಮಾಹಿತಿಯ ಪ್ರಕಾರ ಹೆಣ್ಣು ಮಕ್ಕಳ ಕೊರತೆ ಯಾವುದೇ ಒಂದು ಜಾತಿಗೆ ಸೀಮಿತವಾಗಿ ಉಳಿದಿಲ್ಲ. ಹಿಂದೂ ಧರ್ಮದ ಹಲವು ಜಾತಿಗಳಲ್ಲಿ ಈ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ಹಲವು ದಶಕಗಳಿಂದ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳ ಕೊರತೆ ಕಾಣಿಸಿಕೊಂಡ ಪರಿಣಾಮ ಆ ಜಾತಿಯ ಹುಡುಗರು ಸಸ್ಯಾಹಾರಿ ಜಾತಿಯ ಹೆಣ್ಣು ಮಕ್ಕಳನ್ನು ಹುಡುಕಿ ವಿವಾಹವಾಗುತ್ತಿದ್ದ ಪರಿಪಾಠವು ಇತ್ತು. ಸಸ್ಯಾ ಹಾರಿ ಹೆಣ್ಣುಮಕ್ಕಳು ಸಿಗದಿದ್ದಾಗ ಮಾಂಸಾಹಾರಿ ಹೆಣ್ಣು ಮಕ್ಕಳನ್ನು ವಿವಾಹವಾಗಿ ವಿವಾಹದ ನಂತರ ಮಾಂಸಾಹಾರ ತ್ಯಜಿಸಿ ಆ ಧರ್ಮದ ನೀತಿ ನಿಯಮಗಳ ಪಾಲನೆ ಮಾಡಲಾಗುತ್ತಿದೆ. ಉದಾಹರಣೆಗೆ ಕುಶಾಲ ನಗರದ ಸಮೀಪದ ಮಾಂಸಾಹಾರಿ ಕುಟುಂಬದ ಎರಡು ಹೆಣ್ಣು ಮಕ್ಕಳನ್ನು ಸುಬ್ರಹ್ಮಣ್ಯ ಮೂಲದ ಬ್ರಾಹ್ಮಣ ಕುಟುಂಬದವರು ವಿವಾಹ ಮಾಡಿ ಕೊಂಡಿದ್ದು, ಒಂದು ರೀತಿ ಜಾತಿ ಪದ್ಧತಿಯನ್ನು ನಿರ್ಮೂಲನೆÀಗೊಳಿಸಲು ಪ್ರಕೃತಿಯೇ ಮಧ್ಯೆ ಪ್ರವೇಶ ಮಾಡಿರಬಹುದೇ...! -ಕೆ.ಎಸ್. ಮೂರ್ತಿ