ಸಿದ್ದಾಪುರ, ಫೆ. 22 : ಕೇಂದ್ರ ಸರ್ಕಾರವು ಧರ್ಮದ ಆಧಾರದಲ್ಲಿ ದೇಶದಲ್ಲಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಮೈಸೂರಿನ ಕಾರ್ಮಿಕ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಕೆ. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು. ನೆಲ್ಯಹುದಿಕೇರಿ ಪ್ರಗತಿಪರ ಆಂದೋಲನ ವೇದಿಕೆಯ ವತಿಯಿಂದ ನೆಲ್ಯಹುದಿಕೇರಿಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಸಂವಿಧಾನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಸಮಾನ ಹಕ್ಕು ಇದ್ದು ಜಾತ್ಯತೀತ ರಾಷ್ಟ್ರವಾಗಿದೆ. ಆದರೂ ಕೂಡ ಒಂದು ಜಾತಿಯನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದೇಶದಲ್ಲಿ ಪೌರತ್ವವನ್ನು ಜಾರಿಗೆ ತರಲು ಯತ್ನಿಸುತ್ತಿರುವುದು ಖಂಡನೀಯ ಎಂದರು. ಧರ್ಮ ಆಧಾರಿತ ಪೌರತ್ವ ಕಾಯ್ದೆಯನ್ನು ಎಲ್ಲರೂ ವಿರೋಧಿಸಬೇಕೆಂದು ಕರೆ ನೀಡಿದರು. ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲ ಎ. ಹರಿರಾಮ್ ಮಾತನಾಡಿ ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರವು ಆಡಳಿತಕ್ಕೆ ಬಂದ ನಂತರ ಪರಸ್ಪರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆಯೆಂದು ಟೀಕಿಸಿದರು. ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರ್ಕಾರವು ನಿರುದ್ಯೋಗಿಗಳಿಗೆ ಉದ್ಯೋಗ ನೀಡದೇ ಧರ್ಮದ ಹೆಸರಿನಲ್ಲಿ ದೇಶದಲ್ಲಿ ಆಡಳಿತ ನಡೆಸುತ್ತಿದೆಯೆಂದು ದೂರಿದರು. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇದನ್ನು ಬಗೆಹರಿಸದ ಕೇಂದ್ರ ಸರ್ಕಾರವು ಜನರ ವಿರೋಧದ ನಡುವೆ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಹೋರಟಿರುವುದು ಖಂಡನೀಯ ಎಂದರು. ಪೌರತ್ವ ಕಾಯ್ದೆ ವಿರುದ್ಧ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಗತಿಪರ ಆಂದೋಲನ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸಬಾಸ್ಟಿನ್ ವಹಿಸಿದ್ದರು. ವೇದಿಕೆಯಲ್ಲಿ ಮಣಿ ಮಹಮ್ಮದ್, ನೆರವಂಡ ಉಮೇಶ್, ವಕೀಲ ವಿದ್ಯಾಧರ್, ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಗೂ ಜನಪರ ಆಂದೋಲನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಪಿ.ಆರ್. ಭರತ್ ಸ್ವಾಗತಿಸಿ, ಗ್ರೇಸಿಮಣಿ ವಂದಿಸಿದರು. ಎಂ.ಎ. ಅಜೀಜ್ ಕಾರ್ಯಕ್ರಮ ನಿರೂಪಿಸಿದರು.