ದಕ್ಷನ ಮಗಳಾದ ದಾಕ್ಷಾಯಿಣಿ (ಸತಿ) ತನ್ನ ಪತಿಯಾದ ಶಿವ ಬೇಡವೆಂದರೂ ಕೇಳದೆ ದಕ್ಷ ಮಾಡುತ್ತಿದ್ದ ಯಜ್ಞಕ್ಕೆ ಹೋಗಿ ಅಲ್ಲಿ ಅವಮಾನಿತಳಾದಳು. ತನ್ನ ಅರಮನೆಯಲ್ಲಿ ನಡೆದ ಮಹಾಯಾಗಕ್ಕೆ ದೇವ ದೇವತೆಗಳನ್ನು ಸಮಸ್ತರನ್ನು ಆಹ್ವಾನಿಸಿ, ಬೇಕೆಂದೆ ಅಳಿಯ ಶಿವನನ್ನು ಕರೆಯದೆ ದಕ್ಷ ಅಲಕ್ಷ್ಯ ಮಾಡಿದ. ಯಾಗದ ವಿಷಯ ಅರಿತ ಸತಿಗೆ ತವರಿನ ವ್ಯಾಮೋಹ, ಶಿವನು ಬೇಡವೆಂದು ಸೂಕ್ಷ್ಮವಾಗಿ ತಿಳಿಸಿದರೂ ಅರಿಯದೆ ತವರಿಗೆ ಬಂದಳು. ಸಮಸ್ತರೆದುರು ದಕ್ಷ ರಾಜನು ಅಳಿಯನನ್ನು ಹಳಿದ, ಮಗಳನ್ನು ತಿರಸ್ಕರಿಸಿದ. ತಂದೆಯ ನಡತೆಯಿಂದ ಕಂಗೆಟ್ಟಳು ಸತಿ ದಾಕ್ಷಾಯಿಣಿ ತನ್ನಿಂದ ಪತಿಗೆ ಅವಮಾನವಾಯಿತೆಂದು ಮರುಗಿದಳು. ಅಭಿಮಾನಧನೆಯಾದ ಆಕೆ ಎಲ್ಲರೂ ಬೆಚ್ಚಿಬೀಳುವಂತೆ ತನ್ನನ್ನೆ ಯಜ್ಞಕುಂಡಕ್ಕೆ ಅರ್ಪಿಸಿಕೊಂಡು ದೇಹತ್ಯಾಗ ಮಾಡಿದಳು. ವಿಷಯವರಿತ ಶಿವ ರೌದ್ರನಾದ,
ಉಗ್ರನಾದ ಶಿವನ ಜಟೆಯಿಂದ ಜನಿಸಿದ ಮಹಾಶಕ್ತಿವಂತ ಗಣ ವೀರಭದ್ರನೊಂದಿಗೆ ಇತರÀ ಗಣಗಳು ದಕ್ಷ ಯಜ್ಞಕ್ಕೆ ಅಬ್ಬರಿಸಿ ಬಂದರು. ದಕ್ಷನ ಶಿರ ಕತ್ತರಿಸಲ್ಪಟ್ಟಿತು. ಎಲ್ಲ ದೇವತೆಗಳು ಶಿವನನ್ನು ಸ್ತುತಿಸಿ ಶಾಂತಗೊಳಿಸಿದ ಬಳಿಕ ಶಿವ ಪ್ರಸÀನ್ನನಾದ. ದಕ್ಷನ ಕತ್ತರಿಸಿದ ತಲೆಭಾಗಕ್ಕೆ ಮೇಕೆಯ ತಲೆಯನ್ನು ಜೋಡಿಸಿ ಯಜ್ಞವನ್ನು ಪೂರ್ಣಗೊಳಿಸಲಾಯಿತು. ಅನಂತರ ದಾಕ್ಷಾಯಿಣಿಯು ಪವಿತ್ರಾತ್ಮ ಳಾಗಿ ಹಿಮವತ್ ಪರ್ವತರಾಜನ ಮಗಳಾಗಿ ಆತನ ಪತ್ನಿ ಮೇನೆಯಲ್ಲಿ ಮರು ಜನ್ಮ ಪಡೆದಳು.
ಪಾರ್ವತಿ ಬಾಲ್ಯದಿಂದಲೇ ಶಿವನಲ್ಲಿ ಅನುರಕ್ತಳು, ಸದಾ ಶಿವಧ್ಯಾನ ನಿರತಳು. ದೇವಲೋಕದಲ್ಲಿ ತಾರಕಾಸುರನ ಬಾಧೆ ತಾಳಲಾರದಂತಾ ಗಿತ್ತು. ದೇವತೆಗಳು ತಮ್ಮ ದುಃಖವನ್ನು ಬ್ರಹ್ಮ, ವಿಷ್ಣುಗಳಲ್ಲಿ ತೋಡಿಕೊಂಡರು. ಎಲ್ಲರೂ ಯೋಚಿಸಿ ಶಿವಪಾರ್ವತಿಯ ರಲ್ಲಿ ಜನಿಸಿದವನಿಂದ ಮಾತ್ರ ತಾರಕಾಸುರ ಸಂಹಾರ ಸಾಧ್ಯ ಎಂಬ ತೀರ್ಮಾನಕ್ಕೆ ಬಂದರು. ಇದಕ್ಕಾಗಿ ಮುಂದಿನ ಕಾರ್ಯಗಳನ್ನು ಕೈಗೊಂಡರು. ಬೃಹಸ್ಪತಿ ಮನ್ಮಥನನ್ನು ಈ ಕಾರ್ಯಕ್ಕೆ ನಿಯೋಜಿಸಿದ. ಅಷ್ಟು ಹೊತ್ತಿಗಾಗಲೇ ಪಾರ್ವತಿ ಪ್ರಾಪ್ತ ವಯಸ್ಕಳಾಗಿದ್ದಳು. ಪಾರ್ವತಿಯ ಮೇಲೆ ಶಿವನಿಗೆ ವ್ಯಾಮೋಹ ಉಂಟಾಗುವಂತೆ ಮಾಡಬೇಕಾದರೆ ಮನ್ಮಥನ ಪ್ರೇಮ ಬಾಣದಿಂದ ಮಾತ್ರ ಸಾಧ್ಯ ಎಂದು ಆತನನ್ನು ದೇವತೆಗಳು ಒಪ್ಪಿಸಿದರು. ಮನ್ಮಥ ತನ್ನ ಪತ್ನಿ ರತಿ ಹಾಗೂ ವಸಂತನೊಡನೆ ಶಿವನ ಆಶ್ರಮಕ್ಕೆ ಬಂದ. ಶಿವ ಅಲ್ಲಿ ತಪಸ್ಸಿನಲ್ಲಿ ತಲ್ಲೀನನಾಗಿದ್ದ. ತನ್ನ ಮೇಲೆ ಹೂಬಾಣ ಬಿಟ್ಟ ಮನ್ಮಥನನ್ನು ಶಿವ ಮೂರನೇ Pಣ್ತೆರೆದು ಸುಟ್ಟ. ಮನ್ಮಥನ ಪತ್ನಿ ರತಿದೇವಿಯ ದುಃಖವನ್ನು ಕಂಡ ಶಿವ ಕರುಣೆ ತೋರಿ “ನಿನ್ನ ಪತಿ ಅನಂಗನಾಗಿದ್ದುಕೊಂಡೆ ಕ್ರಿಯಾತ್ಮಕವಾಗಿರುತ್ತಾನೆ. ಮುಂದೆ ಮಹಾವಿಷ್ಣುವು ಭೂಮಿಯಲ್ಲಿ ವಸುದೇವ-ದೇವಕಿಯರÀ ಮಗನಾಗಿ ಶ್ರೀ ಕೃಷ್ಣನಾಗಿ ಹುಟ್ಟಿದಾಗ ಅವನಿಗೆ ನಿನ್ನ ಗಂಡ ಮನ್ಮಥ ಮಗನಾಗಿ ಪ್ರದ್ಯುಮ್ನ ಎಂಬ ಹೆಸರಿನವನಾಗಿ ಹುಟ್ಟುತ್ತಾನೆ” ಎಂದು ಸಮಾಧಾನ ಮಾಡಿದ. ಇಷ್ಟಾಗಿಯೂ ಒಲಿಯದ ಶಿವನನ್ನು ಪಾರ್ವತಿ ಉಗ್ರ ತಪಸ್ಸಿನಿಂದ ಒಲಿಸಲು ಯತ್ನಿಸಿದಳು. ಪಾರ್ವತಿ ತಪಸ್ಸು ಮಾಡುವಲ್ಲಿಗೆ ಶಿವನು ಬ್ರಾಹ್ಮಣ ವಟುವಾಗಿ ಬಂದು ಅವಳನ್ನು ಪರೀಕ್ಷಿಸಿದ. ಆತನೇ ಶಿವನೆಂದು ಪಾರ್ವತಿ ಅರಿತಳು. ಆಗ ಪೂರ್ಣ ಒಲಿದ ಶಿವ ಅವಳನ್ನೇ ಮದುವೆಯಾಗುವುದಾಗಿ ತಿಳಿಸಿ ಆಶ್ವಾಸನೆ ಕೊಟ್ಟು ಹಿಂತಿರುಗಿದ. ಹಿಮವಂತ ತನ್ನ ಪುತ್ರಿ ಪಾರ್ವತಿಗೆ ಸ್ವಯಂವರ ಏರ್ಪಡಿಸಿದ. ದೇವತೆಗಳೆಲ್ಲ ನೆರೆದರು. ಶಿವ ಶಿಶು ವೇಷಧಾರಿಯಾಗಿ ಆಗಮಿಸಿ ಪಾರ್ವತಿಯ ತೊಡೆಯ ಮೇಲೆ ಮಲಗಿದ. ಆ ಶಿಶು ಯಾರು ಎಂಬ ಅರಿವಿಲ್ಲದೆ, ಅಷ್ಟ ದಿಕ್ಪಾಲಕರೂ ತಮ್ಮ ದಿವ್ಯಾಯುಧ ಗಳಿಂದ ಮಗುವನ್ನು ಅಲ್ಲಿಂದ ಎಬ್ಬಿಸಲು ಯತ್ನಿಸಿದರು. ಇತರ ಎಲ್ಲ ದೇವತೆಗಳೂ ಪ್ರಯತ್ನಿಸಿದರು. ಈ ಸಂದರ್ಭ ಅವರೆಲ್ಲರೂ ತಮ್ಮ ಕೈಯಲ್ಲಿದ್ದ ಶಸ್ತ್ರಾಸ್ತ್ರ ಸಹಿತ ಅಲುಗಾಡದಂತೆ ಸ್ತಬ್ಧಗೊಂಡರು. ಎಲ್ಲರೂ ಶಿವನ ಮಾಯೆಯಿಂದ ಹಾಗೆಯೇ ನಿಶ್ಚಲರಾಗಿನಿಂತು ಬಿಟ್ಟರು. ಆ ಸಂದರ್ಭ ಬ್ರಹ್ಮನು ನಿಜಾಂಶ ತಿಳಿದು ಶಿವನನ್ನು ಸ್ತೋತ್ರ ಮಾಡಿದ; ಎಲ್ಲರನ್ನೂ ರಕ್ಷಿಸುವಂತೆ ಶಿವನನ್ನು ಪ್ರಾರ್ಥಿಸಿದ. ಶಿವನು ಸ್ತಬ್ಧಗೊಂಡ ಎಲ್ಲರಿಗೂ ದಿವ್ಯದೃಷ್ಟಿ ನೀಡಿ ನಿಜರೂಪ ತೋರಿದ. ಅವರೆಲ್ಲ ಆತನ ಮೇಲೆ ಹೂ ಮಳೆಗರೆದರು. ಪಾರ್ವತಿ- ಪರಮೇಶ್ವರರ ವಿವಾಹ ಹಿಮಾಲಯ ಪರ್ವತದಲ್ಲಿ ಏರ್ಪಾಡಾದ ಈ ಸಂದರ್ಭ ಈ ಮಹಾನ್ ಸಂಭ್ರಮದ ವೀಕ್ಷಣೆಗೆ ಸ್ವರ್ಗ ಲೋಕದ ಸಕಲ ದೇವತೆಗಳು ಮೇಳೈಸಿದರು. ಎಲ್ಲ ಮಹರ್ಷಿಗಳು, ಯಕ್ಷ, ಕಿನ್ನರ, ಕಿಂಪುರುಷರು, ಪರ್ವತ ಶ್ರೇಷ್ಠರು ನೆರೆದರು. ಭೂಮಂಡಲದ ಸಾರ್ವಭೌಮರು, ರಾಜಶ್ರೇಷ್ಠರೂ ಕಲೆತರು. ಹೀಗೆ ವಿಶ್ವದೆಲ್ಲೆಡೆಯ ಪ್ರಮುಖರು ಒಂದೆಡೆ ಸೇರಿದಾಗ ಹಿಮವತ್ಪರ್ವತದಲ್ಲಿ ದಟ್ಟಣೆ ಅಧಿಕವಾಯಿತು. ಒತ್ತಡ ಹೆಚ್ಚಿತು. ಹಿಮಾಲಯ ಪರ್ವತವು ಒಂದೆಡೆ ವಾಲತೊಡಗಿತು. ಇದರಿಂದ ಲೋಕವೇ ಅಲುಗಾಡತೊಡಗಿತು. ಪರ್ವತಗಳೆಲ್ಲ್ಲ ಕುಸಿಯತೊಡಗಿದವು. ಸಮುದ್ರಗಳೆಲ್ಲ್ಲ ಉಕ್ಕಿ ಹರಿಯತೊಡಗಿದವು. ಪ್ರಳಯವೇ ಸಂಭವಿಸಿತೇನೋ ಎಂದು ಎಲ್ಲರೂ ಭಯಭೀತರಾದರು. ಆಗ “ಶಿವನೇ ಗತಿ” ಎಂದು ಭಾವಿಸಿದ ನೆರೆದವರು ಅವನ ಮೊರೆಹೊಕ್ಕರು. ಸಂಭ್ರಮ ನೋಡಲು ಬಂದ ತಮಗೆ ಒದಗಿ ಬಂದ ಈ ಸಂಕಟವನ್ನು ಕೊನೆಗಾಣಿಸಬೇಕೆಂದು ಪ್ರಾರ್ಥಿಸಿದರು. ಪರಿಸ್ಥಿತಿಯನ್ನು ಅರಿತ ಶಿವ ಹೇಳುತ್ತಾನೆ “ನಮ್ಮಿಬ್ಬರ ವಿವಾಹವನ್ನು ನೋಡಲು ನೀವೆಲ್ಲ್ಲ ಒಂದೇ ಕಡೆ ಮೇಳೈಸಿದುದರಿಂದ ಈ ಪರಿಸ್ಥಿತಿ ತಲೆದೋರಿದೆ. ಎಲ್ಲಾ ಭಾರವೂ ಹಿಮಾಲಯದ ಉತ್ತರ ದಿಕ್ಕಿನ ಮೇಲಿದ್ದು ಇದರಿಂದಾಗಿ ಪರ್ವತವು ಒಂದೆಡೆ ವಾಲಲು ಕಾರಣ ವಾಗಿದೆ. ಈ ಭಾರವನ್ನು ಸರಿದೂಗಿಸಬೇಕಾದರೆ ದಕ್ಷಿಣ ದಿಕ್ಕಿನಲ್ಲಿ ಸಮನಾದ ಭಾರವನ್ನು ಹಾಕಬೇಕು. ಆಗ ಭೂಮಿ ಸ್ಥಿರವಾಗಿ ನಿಲ್ಲುತ್ತದೆ. ಇದನ್ನು ಸಮಗೊಳಿಸುವ ಸಾಮಥ್ರ್ಯ ಮಹಾನ್ ತಪಸ್ವಿ ಅಗಸ್ತ್ಯ ಮಹರ್ಷಿಗಳಿಗೆ ಮಾತ್ರ ಇದೆ. ಅವರನ್ನು ಬಿಟ್ಟರೆ ಈ ದೈವಿಕ ಕಾರ್ಯಕ್ಕೆ ಬೇರೆ ಯಾರೂ ಸರಿ ಸಾಟಿಯಾಗಲಾರರು. ತಮ್ಮ ತಪೋ ಮಹಿಮೆಯಿಂದ ಅವರು ಈ ಮಹತ್ಕಾರ್ಯವನ್ನು ನಿಭಾಯಿಸಬಲ್ಲರು” ಎಂದು ಶಿವ ಆಶ್ಚರ್ಯಕರ ನುಡಿಯಾಡುತ್ತಾನೆ. ಇದನ್ನು ಕೇಳಿದವರೆಲ್ಲರೂ ಅಗಸ್ತ್ಯರೊಬ್ಬರಿಂದ ಈ ರೀತಿ ಸಮತೋಲನ ಸಾಧಿಸಲು ಸಾಧ್ಯವೇ? ಎನ್ನುವ ವಿಸ್ಮಯದ ನೋಟ ಬೀರಿದರೂ ಸಾಕ್ಷಾತ್ ಪರಶಿವನೇ ಹೇಳಿದುದರಿಂದ ಅಸಾಧ್ಯವಾಗಲಾರದು ಎಂಬ ವಿಶ್ವಾಸದಿಂದ ಮುಂದಿನ ಬೆಳವಣಿಗೆ ಯನ್ನು ಕುತೂಹಲದಿಂದ ಗಮನಿಸುತ್ತಾರೆ. ಶಿವ ತನ್ನ ವಿವಾಹಕ್ಕೆ ಉತ್ಸಾಹದಿಂದ ಬಂದಿದ್ದ ಅಗಸ್ತ್ಯರನ್ನು ಆಹ್ವಾನಿಸುತ್ತ “ಅಗಸ್ತ್ಯರೇ, ನೀವು ಈಗಲೇ ದಕ್ಷಿಣ ದಿಕ್ಕಿಗೆ ಹೋಗಿ ಉತ್ತರಕ್ಕೆ ವಾಲಿರುವ ಈ ಪರ್ವತವನ್ನು ಸಮಸ್ಥಿತಿಗೆ ತನ್ನಿ” ಎಂದು ತಿಳಿಸುತ್ತಾನೆ. ಪರಶಿವನ ಮಾತನ್ನು ಆಲಿಸಿದ ಅಗಸ್ತ್ಯರಿಗೆ ಬಹು ದು:ಖ ಹಾಗೂ ನಿರಾಶೆ ಯುಂಟಾಗುತ್ತದೆ. ‘ಶಿವ ಪಾರ್ವತಿಯರ ವಿವಾಹವನ್ನು ಕಣ್ತುಂಬಾ ನೋಡಬೇಕೆಂಬ ಆಸೆಯಿಂದ ಬಂದಿದ್ದೆ. ಆದರೆ, ಇದೀಗ ನನ್ನ ಆಸೆ ಕೈಗೂಡುವದಿಲ್ಲವಲ್ಲ?’ ಎಂದು ಭಾವಿಸಿ ಅವರು ಚಿಂತಾಕ್ರಾಂತರಾಗು ತ್ತಾರೆ. ಅಗಸ್ತ್ಯರ ಮನೋವ್ಯಥೆಯನ್ನು ಅವರ ಮುಖ ಭಾವದಿಂದಲೇ ಸೂಕ್ಷ್ಮವಾಗಿ ಅರಿತ ಶಿವ ಹೇಳುತ್ತಾನೆ “ ಅಗಸ್ತ್ಯರೇ ನೀವು ಮೊದಲು ಲೋಕ ಮಂಗಳ ಕಾರ್ಯವನ್ನು ಮಾಡಲು ಈ ಪರ್ವತದ ದಕ್ಷಿಣ ದಿಕ್ಕಿಗೆ ತ್ವರೆಯಿಂದ ಹೊರಡಿ. ನೀವು ನಮ್ಮ ವಿವಾಹವನ್ನು ನೋಡ ಬೇಕೆಂದು ಆಶಿಸುತ್ತಿರುವಿರಲ್ಲವೇ ? ನಮ್ಮನ್ನು ನಿಮಗೆ ಯಾವಾಗ ನೋಡಬೇಕೆನಿಸುವದೋ ಆಗ ಸ್ಮರಿಸಿಕೊಳ್ಳಿ. ನಾನೂ, ಪಾರ್ವತಿಯೂ ಮದು ಮಕ್ಕಳಂತೆಯೇ ನಿಮಗೆ ತಕ್ಷಣ ದರ್ಶನ ಕೊಡುತ್ತೇವೆ. ನಮ್ಮ ಕಲ್ಯಾಣವನ್ನು ನೀವು ಈ ಪರ್ವತದÀ ದಕ್ಷಿಣ ದಿಕ್ಕಿನಲ್ಲ್ಲಿರುವಾಗ ಅಲ್ಲ್ಲಿಯೇ ನೀವು ವೀಕ್ಷಿಸುವಂತೆ ನಿಮಗೆ ದಿವ್ಯ ದೃಷ್ಟಿಯನ್ನು ಅನುಗ್ರಹಿಸುತ್ತೇನೆ, ಹೋಗಿ ಬನ್ನಿ” ಎಂದು ಹರಸುತ್ತಾನೆ. ಇದನ್ನು ಕೇಳಿ ಅಗಸ್ತ್ಯರು ಪುಳಕಿತಗೊಳ್ಳತ್ತಾರೆ. ಶಿವನು ಇಂತಹ ಅಮೋಘ ಶಕ್ತಿಯನ್ನು ನೀಡಿ ತನಗೆ ಶಿವ ಪಾರ್ವತಿಯರ ಕಲ್ಯಾಣದಂತಹ ಮಹಾನ್ ಪುಣ್ಯ ಕಾರ್ಯದಲ್ಲಿ ನೀಡಿದ ಮಹತ್ತರ ಜವಾಬ್ದಾರಿಕೆಗಾಗಿ ಶಿವನಿಗೆ ಧನ್ಯತೆ ಅರ್ಪಿಸುತ್ತಾರೆÉ. ಅಲ್ಲದೆ, ಅಗಸ್ತ್ಯರು ಹಿಮವತ್ಪರ್ವತದ ದಕ್ಷಿಣ ದಿಕ್ಕಿಗೆ ಹೋಗಿ ನಿಂತುಕೊಂಡ ಕೂಡಲೇ ಉತ್ತರಕ್ಕೆ ವಾಲಿದ್ದ ಪರ್ವತವು ಸಮತೋಲನಗೊಂಡು ಸ್ಥಿರವಾಗುತ್ತದೆ. ವಿವಾಹಕ್ಕೆ ಬಂದವರೆಲ್ಲರೂ ನಿರಾಳರಾಗಿ ನಿಟ್ಟುಸಿರು ಬಿಡುತ್ತಾರೆ. ಅಲ್ಲೋಲ್ಲ ಕಲ್ಲೋಲ್ಲಗೊಂಡಿದ್ದ ವಿಶ್ವವು ಯಥಾಸ್ಥಿತಿಗೆ ಮರಳುತ್ತದೆ. ಪಾರ್ವತಿ ಪರಮೇಶ್ವರರ ವಿವಾಹವು ಸುಸೂತ್ರವಾಗಿ ನೆರವೇರುತ್ತದೆ. ಸಾಕ್ಷಾತ್ ನಾರಾಯಣನೇ ಸಾಲಂಕೃತ ಪಾರ್ವತಿಯನ್ನು ಧಾರೆಯೆರೆದು ಶಿವನಿಗೆ ವಿವಾಹ ಮಾಡಿಸುತ್ತಾನೆ. ಈ ಅದ್ಭುತ ದೃಶ್ಯವನ್ನು ದಕ್ಷಿಣ ಭಾಗದಲ್ಲಿ ಏಕಾಂಗಿಯಾಗಿ ನಿಂತಿದ್ದ ಅಗಸ್ತ್ಯರು ಶಿವನು ಕರುಣಿಸಿದ ದಿವ್ಯ ದೃಷ್ಟಿಯಿಂದ ನೋಡಿ ಧನ್ಯರಾಗುತ್ತಾರೆ.
ಬಳಿಕ ಶಿವ ಪಾರ್ವತಿಯರಲ್ಲಿ ಷಣ್ಮುಖನಾಥ ಸುಬ್ರಹ್ಮಣ್ಯನ ಜನನವಾಗುತ್ತದೆ. ಬಾಲಕನಾಗಿದ್ದಾಗಲೇ ದೇವಸೇನಾಧಿಪತಿಯ ಪಟ್ಟ ಅಲಂಕರಿಸಿದ ಕಾರ್ತಿಕೇಯ(ಸುಬ್ರಹ್ಮಣ್ಯ)ನು ಲೋಕಕಂಟಕನಾಗಿದ್ದ ತಾರಕಾಸುರÀನನ್ನು ವಧಿಸುತ್ತಾನೆ. ಆ ಮೂಲಕ ವಿಶ್ವದಲ್ಲಿ ಮತ್ತೆ ಶಾಂತಿ ನೆಲೆಸುತ್ತದೆ.
ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಣೆಯ “ಪುರಾಣ-ಭಾರತ ಕೋಶ”, ಮೈಸೂರು ವಿಶ್ವವಿದ್ಯಾಲಯ ಪ್ರಕಾಶನದ “ಪುರಾಣನಾಮ ಚೂಡಾಮಣಿ” ಹಾಗೂ ಭಾರತ ಸಂಸ್ಕøತಿ ಪ್ರಕಾಶನದ “ಅಗಸ್ತ್ಯ.”
ಸಹಕಾರ: ಡಾ. ಶ್ರೀಧರ್ ಹೆಗ್ಡೆ, ಉಪನ್ಯಾಸಕರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿ
(ಮುಂದಿನ ವಾರ: ಶ್ರೀ ರಾಮನಿಗೆ ಅಗಸ್ತ್ಯ ರಿಂದ ದಿವ್ಯಾಸ್ತ್ರಗಳ ನೀಡಿಕೆ)