ಮಡಿಕೇರಿ, ಫೆ. 22: ಖಾಸಗಿ ಕ್ಲಿನಿಕ್‍ಗೆ ತೆರಳಿದ ಯುವಕನೋರ್ವ ಕ್ಲಿನಿಕ್‍ಗೆ ಹಾನಿಯುಂಟು ಮಾಡಿದ್ದಲ್ಲದೆ, ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಮೂರ್ನಾಡುವಿನಲ್ಲಿ ನಡೆದಿದೆ.
ಕೊಂಡಂಗೇರಿ ನಿವಾಸಿ ನೌಫಲ್ ಎಂಬಾತ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಲೆಂದು ಮೂರ್ನಾಡುವಿನ ವೈದ್ಯರಾದ ಅಬ್ದುಲ್ಲ ಎಂಬವರ ಕ್ಲಿನಿಕ್‍ಗೆ ಕರೆದೊಯ್ದಿದ್ದಾನೆ. ಈ ಸಂದರ್ಭ ಟೋಕನ್ ಪ್ರಕ್ರಿಯೆಯಂತೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ. ಇದರಿಂದ ವೈದ್ಯರ ಮೇಲೆ ಆಕ್ರೋಶಗೊಂಡು ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕ್ಲಿನಿಕ್‍ನ ಗಾಜನ್ನು ಪುಡಿಗಟ್ಟಿದ್ದಾನೆ. ಅಲ್ಲದೆ ಕ್ಲಿನಿಕ್‍ನಲ್ಲಿದ್ದ ಬೆಂಚಿನಿಂದ ವೈದ್ಯರ ಮೇಲೆ ಹಲ್ಲೆ ಸಡೆಸಲು ಯತ್ನಿಸಿರುವುದಾಗಿ ವೈದ್ಯ ಅಬ್ದುಲ್ಲ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಚಂದ್ರಶೇಖರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.