ಮಡಿಕೇರಿ, ಫೆ. 22: ಮಹಾಶಿವರಾತ್ರಿ ಪ್ರಯುಕ್ತ ಕಾಲತೀತನಾದ ಮಹಾದೇವನಿಗೆ ನಾಡಿನೆಲ್ಲೆಡೆ ವಿಶೇಷ ಪೂಜೆ, ಹೋಮ, ಹವನಗಳೊಂದಿಗೆ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ನಮಿಸುವ ಮೂಲಕ ಶಿವನ ಕೃಪೆಗೆ ಪಾತ್ರರಾದರು. ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ದಾಸವಾಳ ಶ್ರೀ ಮುನೇಶ್ವರ ವೀರಭದ್ರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿತು.ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ರುದ್ರಹೋಮ, ವಿಶೇಷ ಅಲಂಕಾರ ಸೇವೆಯೊಂದಿಗೆ ರುದ್ರಾಭಿಷೇಕ ಬಳಿಕ ಮಹಾಪೂಜೆ ಹಾಗೂ ಅಹೋರಾತ್ರಿ ಜಾಮಪೂಜೆಗಳು ನೆರವೇರುವುದರೊಂದಿಗೆ ಸಾವಿರಾರು ಭಕ್ತರು ಶ್ರೀ ಓಂಕಾರೇಶ್ವರನ ಕೃಪೆಗೆ ಪಾತ್ರರಾದರು.ಶ್ರೀ ಮುನೇಶ್ವರ ವೀರಭದ್ರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅನ್ನದಾನ, ರಂಗಪೂಜೆ, ಧಾರ್ಮಿಕ ಸಭೆಯೊಂದಿಗೆ ಜಾಗರಣೆ ಮೂಲಕ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಕ್ಕುಡ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಯೊಂದಿಗೆ ವಿಶೇಷ ಪೂಜೆ, ಅನ್ನದಾನ ಏರ್ಪಡಿಸಲಾಗಿತ್ತು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಅಮರನಾಥನ ದರ್ಶನದೊಂದಿಗೆ ಸದ್ಭಕ್ತರಿಗೆ ಪ್ರಸಾದ ಹಾಗೂ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು. ಜಿಲ್ಲಾ ಕೇಂದ್ರ ಹಾಗೂ ಕೊಡಗಿನ ಪುಷ್ಪಗಿರಿ ತಪ್ಪಲು ಶ್ರೀ ಶಾಂತಮಲ್ಲಿಕಾರ್ಜುನ ಸನ್ನಿಧಿ ಸೇರಿದಂತೆ ಬಹುತೇಕ ಗ್ರಾಮೀಣ (ಮೊದಲ ಪುಟದಿಂದ) ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ದೈವಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಪೂಜೆ, ಹೋಮ, ಹವನ, ಜಾಗರಣೆಯ ಕುರಿತು ವರದಿಗಳು ಲಭಿಸಿವೆ.ಭಾಗಮಂಡಲ: ಮಹಾ ಶಿವರಾತ್ರಿ ಪ್ರಯುಕ್ತ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ತಲಕಾವೇರಿ ದೇವಾಲಯ ಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.ಬೆಳಿಗ್ಗೆ 7 ಗಂಟೆಯಿಂದ ಶತರುದ್ರಾಭಿಷೇಕ ಬಳಿಕ 9.30 ರವರೆಗೆ ರುದ್ರಹೋಮ ಜರುಗಿತು. ನೂರಾರು ಭಕ್ತರು ಶತರುದ್ರಪಾರಾಯಣ ಹಾಗೂ ರುದ್ರಹೋಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಸಂಜೆ 6.30ರಿಂದ ವಿಶೇಷಪೂಜೆ ನಡೆದು ಒಂಬತ್ತು ಸುತ್ತು ದೇವರ ನೃತ್ಯಬಲಿ ಜರುಗಿತು.ನಂತರ ತ್ರಿವೇಣಿ ಸಂಗಮಕ್ಕೆ ತೆರಳಿ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಯಿತು. ಆಕರ್ಷಕ ಸಿಡಿಮದ್ದು ಪ್ರದರ್ಶನ ಭಕ್ತರನ್ನು ರಂಜಿಸಿತು.ದೇವಾಲಯದ ಎದುರು ಕೊಲ್ಲೂರು ಮೂಕಾಂಬಿಕೆ ಕಥಾಪ್ರಸಂಗ ಯಕ್ಷಗಾನ ನಡೆಯಿತು.ಪೂಜಾಕಾರ್ಯಗಳನ್ನು ಮೈಸೂರಿನ ಶ್ರೀನಿವಾಸ ಪೈ ನೆರವೇರಿಸಿದರು.ಈ ಸಂದರ್ಭ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್, ರಮೇಶ್, ಮೀನಾಕ್ಷಿ, ಅಣ್ಣಯ್ಯ. ಕಾವೇರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿ ಜಗದೀಶ್, ಪಾರುಪತ್ಯೆಗಾರ ಪೊನ್ನಣ್ಣ ಉಪಸ್ಥಿತರಿದ್ದರು.
ಸಂಜೆ 7 ಗಂಟೆಯಿಂದ ಭಕ್ತರು ಭಗಂಡೇಶ್ವರ ದೇವಾಲಯದಲ್ಲಿನ ಲಕ್ಷದೀಪಕ್ಕೆ ಎಣ್ಣೆ ಸಮರ್ಪಿಸಿದರು.
ಕಾವೇರಿ ಬೈವಾಡ್ ಯಾತ್ರೆ
ನಾಪೋಕ್ಲು: ಶಿವರಾತ್ರಿ ಉತ್ಸವದ ಅಂಗವಾಗಿ ಕಾವೇರಿ ಬೈವಾಡ್ ಸಮಿತಿಯಿಂದ ತಲಕಾವೇರಿಗೆ ಇರುಮುಡಿ ಯಾತ್ರೆಯನ್ನು ಕೈಗೊಳ್ಳ ಲಾಯಿತು. ಕಳೆದ 32 ವರ್ಷಗಳಿಂದ ಕಾವೇರಿ ಬೈವಾಡ್ ಸಮಿತಿಯ ವತಿಯಿಂದ ತಲಕಾವೇರಿ ಕ್ಷೇತ್ರಕ್ಕೆ ಇರುಮುಡಿ ಯಾತ್ರೆ ತೆರಳುವ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ವ್ರತಧಾರಿಗಳು ಶ್ರದ್ಧಾಭಕ್ತಿಯಿಂದ 48 ದಿನಗಳ ಕಾಲ ವೃತ ಅಚರಿಸಿ ಮಹಾ ಶಿವರಾತ್ರಿ ದಿನದಂದು ಪಾರಾಣೆ, ನಾಪೋಕ್ಲು, ಮೊದಲಾದ ವಿವಿಧ ಕಡೆಗಳಿಂದ ಅಧಿಕ ವ್ರತಧಾರಿಗಳು ಇಲ್ಲಿನ ಭಗವತಿ ದೇವಾಲಯದಲ್ಲಿ ಇರುಮುಡಿ ಕಟ್ಟು ತುಂಬಿಸಿ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳಿ ಬಳಿಕ ಭಾಗಮಂಡಲದ ಮುಖಾಂತರ ತಲಕಾವೇರಿಗೆ ತೆರಳಿದರು.
ಗುರು ಸ್ವಾಮಿ ಬಿದ್ದಂಡ ಪೊನ್ನಣ್ಣ ನೇತೃತ್ವದಲ್ಲಿ ಭಗವತಿ ದೇವಾಲಯದಲ್ಲಿ ಶುಕ್ರವಾರ ಇರುಮುಡಿ ಕಟ್ಟು ತುಂಬಿಸಲಾಯಿತು.ಅರ್ಚಕ ಹರೀಶ್ ಭಟ್ ವಿಶೇಷಪೂಜೆ ನೆರವೇರಿಸಿದರು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಿ ನಂತರ ಪೂಜೆಯನ್ನು ಸಲ್ಲಿಸಿ ಮಹಾ ಮಂಗಳಾರತಿ ಪ್ರಸಾದ ಸ್ವೀಕರಿಸಿ ನಂತರ ತಲಕಾವೇರಿಗೆ ತೆರಳಿದರು.ಅಲ್ಲಿ ದೇವರಿಗೆ ನೈವೇದÀ್ಯ ಅರ್ಪಿಸಿ ಕಟ್ಟನ್ನು ಸಡಿಲಿಸಿ ಶಿವ ಧ್ಯಾನದಲ್ಲಿ ಭಕ್ತಿಯಿಂದ ಪ್ರಸಾದ ಸ್ವೀಕರಿಸಿ ಹಿಂತಿರುಗಿದರು.
ಇರ್ಪು ಶ್ರೀ ರಾಮೇಶ್ವರ
ಪೊನ್ನಂಪೇಟೆ: ದಕ್ಷಿಣ ಕೊಡಗಿನ ಪ್ರಸಿದ್ಧ ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ವಿಜೃಂಭಣೆ ಯಿಂದ ನೆರವೇರಿಸಲಾಯಿತು. ಶಿವರಾತ್ರಿ ದಿವಸ ಬೆಳಿಗಿನಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದರು. ರಾತ್ರಿ 10 ಗಂಟೆಗೆ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ ಭಕ್ತಾದಿಗಳಿಗೆ ಸಾಂಸ್ಕೃತಿಕ ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾವೇರಿ ಕಲಾ ಸಿರಿ ತಂಡದ ಕಲಾವಿದರು ಸುಮಧುರ ಗೀತಾಗಾಯನಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಇಂದು ಬೆಳಿಗ್ಗೆ ಸಾವಿರಾರು ಭಕ್ತಾದಿಗಳು ಇರ್ಪುವಿನ ಸುಪ್ರಸಿದ್ದ ಲಕ್ಷ್ಮಣ ತೀರ್ಥ ನದಿಯ ಜಲಧಾರೆಗೆ ಮೈಯೊಡ್ಡಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಮದ್ಯಾಹ್ನ 11.30ಗಂಟೆಯಿಂದ 4.30ವರೆವಿಗೂ ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸ ಲಾಗಿತ್ತು. ಶ್ರೀಮಂಗಲ ಕರುಣಾ ಟ್ರಸ್ಟ್ ಆಸ್ಪತ್ರೆಯ ವೈದ್ಯಾಧಿಕಾರಿ ಅನ್ನ ಪ್ರಸಾದ ಪರಿಶೀಲಿಸಿದರು. ಸುಮಾರು 12000ಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪಿ. ಸತೀಶ್, ಶ್ರೀಮಂಗಲ ಆರ್.ಐ. ಸುದೀಂದ್ರ, ದೇವಾಲಯದ ಪಾರು ಪತ್ಯೆಗಾರ ಅಜ್ಜಮಾಡ ಅಣ್ಣಯ್ಯ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮದ್ರಿರ. ಪಿ. ವಿಷ್ಣು, ಗ್ರಾಮಸ್ಥರ ಸಮಿತಿಯ ಅಧ್ಯಕ್ಷ ತೀತೀರ ಮಂದಣ್ಣ, ಕಾರ್ಯದರ್ಶಿ ಚೋಕಿರ ಹ್ಯಾರಿ, ಪ್ರಮುಖರಾದ ಮಚ್ಚಮಾಡ ಡಾಲಿ ಚೆಂಗಪ್ಪ, ಕುಂಞಂಗಡ ರಮೇಶ್, ಅಲ್ಲೇಟಿರ ವಿಜಯ್ ಮಾಚಯ್ಯ, ಬಾಳೆಯಡ ಅಶೋಕ್, ಅಜ್ಜಮಾಡ ಬೋಪಣ್ಣ, ಆಡಳಿತ ಮಂಡಳಿ ಸದಸ್ಯರು, ಮತ್ತಿತರರು ಹಾಜರಿದ್ದರು. ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಶ್ರೀಮಂಗಲ ಠಾಣಾಧಿಕಾರಿ ದಿನೇಶ್ ಕುಮಾರ್, ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಶ್ರೀ ಮಳೆ ಮಲ್ಲೇಶ್ವರ
ಶನಿವಾರಸಂತೆ ಸಮೀಪದ ಮಾಲಂಬಿ ಬೆಟ್ಟದ ಶ್ರೀ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೆ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ, ಶ್ರೀ ಗಣಪತಿ, ಶ್ರೀ ಬಸವಣ್ಣ ದೇವರಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ದೇವತಾ ಪೂಜೆ ಹಾಗೂ ಮಹಾಮಂಗಳಾರತಿಯೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.
ಬೆಳಿಗ್ಗೆ 6 ಗಂಟೆಯಿಂದ ಸಾವಿರಾರು ಭಕ್ತರು ಬೆಟ್ಟವನ್ನೇರಿ ಬಂದು ಪೂಜೆ ಸಲ್ಲಿಸಿದರು. ಶನಿವಾರಸಂತೆ ಹೋಬಳಿಯಾದ್ಯಂತ ಭಕ್ತರು ಸೇರಿದಂತೆ ಜಿಲ್ಲೆ, ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಯ ಭಕ್ತರು ತಂಡೋಪತಂಡವಾಗಿ ಬೆಟ್ಟವನ್ನೇರಿ ಬಂದು ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯ ಅರ್ಚಕ ಚಂದ್ರಪ್ಪ ಮತ್ತು ತಂಡದವರು ಪೂಜಾ ವಿಧಿಗಳನ್ನು ನೆರವೇರಿಸಿರು.
ದೇವಾಲಯ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೆಟ್ಟದ ಮಾರ್ಗದಲ್ಲಿ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಟ್ಟದ ಕೆಳ ಭಾಗದಲ್ಲಿ ಸಂಜೆಯವರೆಗೆ ಪುಟ್ಟ ಜಾತ್ರೆ ನಡೆಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಮೇಕೇರಿ: ಮಹಾಶಿವರಾತ್ರಿ ಅಂಗವಾಗಿ ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿವಿಧ ಶಿವಾರ್ಚನಾ ಸೇವೆಗಳು ನಡೆದವು.
ಬೆಳಿಗ್ಗೆ 7 ಗಂಟೆಯಿಂದ ಗಣಪತಿಹೋಮ, ಮೃತ್ಯುಂಜಯ ಹೋಮ ಮತ್ತು ಸಂಕಲ್ಪ ಪೂಜೆ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಮೇಕೇರಿ ಗ್ರಾಮದ ಶಕ್ತಿನಗರ, ಕಾವೇರಿ ಬಡಾವಣೆ, ಸುಭಾಷ್‍ನಗರ, ಬಿಳಿಗೇರಿ ಜಂಕ್ಷನ್‍ನಿಂದ ಆರಂಭಗೊಂಡ ಹೊರೆಕಾಣಿಕೆ ಸೇವೆ ದೇವಾಲಯ ಪ್ರವೇಶಿಸಿತು. ಮಕ್ಕಳು, ಮಹಿಳೆಯರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕೈಂಕರ್ಯಗಳು ರಾಧಕೃಷ್ಣಭಟ್ ಮತ್ತು ಕೃಷ್ಣಭಟ್ ನೇತೃತ್ವದಲ್ಲಿ ನಡೆಯಿತು.
ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಭಕ್ತಾಧಿಗಳು ಈಶ್ವರನ ಕೃಪೆಗೆ ಪಾತ್ರರಾದರು. ಸಂಜೆ 6.30 ರಿಂದ ದೇವಾಲಯ ಆವರಣದಲ್ಲಿ ಸಾಂಸ್ಕøತಿಕ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು.