ಮಡಿಕೇರಿ, ಫೆ. 22: ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಮರಳಿ ಅಧಿಕಾರವನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದಾರೆ.

ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ತನಕ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಮಡಿಕೇರಿ ತಾಲೂಕಿನ ಮೂರು ಸ್ಥಾನಗಳು ಹಾಗೂ ವೀರಾಜಪೇಟೆ ತಾಲೂಕಿನ ನಾಲ್ಕು ಸ್ಥಾನಗಳು ಬಿಜೆಪಿ ಬೆಂಬಲಿಗರು ಗೆದ್ದುಕೊಂಡಿದ್ದಾರೆ.

ಮಡಿಕೇರಿ ತಾಲೂಕಿನಿಂದ ಸಾಮಾನ್ಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ನಾಪೋಕ್ಲುವಿನ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅವರುಗಳು ತಲಾ 92 ಮತ ಗಳಿಸಿ ಗೆಲುವು ಪಡೆದಿದ್ದಾರೆ. ನಾಯಕಂಡ ಅಯ್ಯಣ್ಣ 87 ಮತದಿಂದ ಜಯಿಸಿದ್ದು, 35 ಮತ ಪಡೆದು ಹೊಸೂರು ರಮೇಶ್ ಜೋಯಪ್ಪ ಪರಾಭವಗೊಂಡಿದ್ದಾರೆ.

ವೀರಾಜಪೇಟೆ: ವೀರಾಜಪೇಟೆ ತಾಲೂಕಿನ ಸಾಮಾನ್ಯ ಮತದಾರರ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಬಿಜೆಪಿ ಬೆಂಬಲಿತ ಮಾಚಿಮಂಡ ಡಿ. ಸುವಿನ್ ಗಣಪತಿ (69), ಮಾಚೆಟ್ಟಿರ ಚೋಟು ಕಾವೇರಪ್ಪ (66) ಹಾಗೂ ಕೆ.ಎನ್. ಸಂದೀಪ್ ಮತ್ತು ಎಸ್.ಎಸ್. ಸುರೇಶ್ ತಲಾ 57 ಮತಗಳಿಂದ ಜಯ ಸಾಧಿಸಿದ್ದಾರೆ. ಇಲ್ಲಿ ಕಣದಲ್ಲಿದ್ದ ಕಂಡ್ರತಂಡ ಪೆಮ್ಮಯ್ಯ (20) ಹಾಗೂ ಬಲ್ಲಟಿಕಾಳಂಡ ಮುದ್ದಯ್ಯ (17) ಮತಗಳಿಗೆ ಸೋಲು ಅನುಭವಿಸಿದ್ದಾರೆ.

ಇನ್ನುಳಿದಂತೆ ಸೋಮವಾರಪೇಟೆ ತಾಲೂಕಿನ 2 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಪಾಸುರ ರಾಜ ಕಾವೇರಪ್ಪ ಹಾಗೂ ತಾಕೇರಿಯ ಎಸ್.ಪಿ. ಪೊನ್ನಪ್ಪ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಅಂತೆಯೇ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹೆಚ್.ಎ. ಬೊಳ್ಳು, ಪರಿಶಿಷ್ಟ ಪಂಗಡ ಮಹಿಳಾ ಮೀಸಲು 2 ಸ್ಥಾನಕ್ಕೆ ಎಂ.ಎಂ. ಧರ್ಮವತಿ, ಮಹಿಳಾ ಮೀಸಲು ಸ್ಥಾನಕ್ಕೆ ಚಟ್ರಂಡ ಲೀಲಾ ಮೇದಪ್ಪ, ಕಡ್ಲೇರ ಯಶೋಧ ನಿಯುಕ್ತಿಗೊಂಡಿ ದ್ದಾರೆ. ಮಾತ್ರವಲ್ಲದೆ ಹಿಂದುಳಿದ ವರ್ಗ ‘ಎ’ ಅಭ್ಯರ್ಥಿ ಯಾಗಿ ನಾಪಂಡ ರವಿ ಕಾಳಪ್ಪ ಹಾಗೂ ‘ಬಿ’ ವರ್ಗದಿಂದ ಪಾಡಿಯಮ್ಮಂಡ ಮನು ಮಹೇಶ್ ಅವಿರೋಧವಾಗಿ ನೇಮಕ ಗೊಂಡಿದ್ದಾರೆ.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ಸುಮಾರು 9 ಸಾವಿರ ಸದಸ್ಯರಿದ್ದರೂ, ಬಹುಮಂದಿ ಮತದಾನದ ಹಕ್ಕು ಕಳೆದುಕೊಂಡಿ ದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಪೈಕಿ ಮಡಿಕೇರಿ ತಾಲೂಕಿನಲ್ಲಿ 127, ಸೋಮವಾರಪೇಟೆ ತಾಲೂಕಿನಲ್ಲಿ 107, ವೀರಾಜಪೇಟೆ ತಾಲೂಕಿನಲ್ಲಿ 78 ಮಂದಿ ಮಾತ್ರ ಚುನಾವಣೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.