ಗೋಣಿಕೊಪ್ಪಲು. ಫೆ. 22: ಸದಾ ಜನಜಂಗುಳಿಯಿಂದ ಕೂಡಿರುವ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಟ್ರಾಫಿಕ್ ವ್ಯವಸ್ಥೆಯು ತಹಬದಿಗೆ ಬಂದಿದ್ದು ಸಾರ್ವಜನಿಕರು, ವಾಹನ ಚಾಲಕರು ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಠಾಣಾಧಿಕಾರಿಗಳು, ವೃತ್ತ ನಿರೀಕ್ಷಕರು ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಖುದ್ದು ಪರಿಶೀಲನೆ ನಡೆಸುತ್ತಿದ್ದು ಸಂಜೆಯ ವೇಳೆಯಲ್ಲಿ ಸ್ವತಃ ಠಾಣಾಧಿಕಾರಿಗಳೇ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ವಿಶೇಷ ಗಮನ ಹರಿಸುವ ಮೂಲಕ ತಾವೇ ಫೀಲ್ಡ್‍ಗಿಳಿದು ಟ್ರಾಫಿಕ್ ಸಮಸ್ಯೆಯ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯು ರಾಜ್ಯ ಹೆದ್ದಾರಿ ಯಾಗಿರುವುದರಿಂದ ನಿರಂತರ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೆತ್ತಿ ಕೊಂಡರೂ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಿರಿಕಿರಿ ತಪ್ಪುತ್ತಿರಲಿಲ್ಲ. ಪೊಲೀಸ್ ಇಲಾಖೆಯ ಕಿರಿಯ ಅಧಿಕಾರಿಗಳ ಮಾತಿಗೆ ಕೆಲವು ಚಾಲಕರು ಮನ್ನಣೆ ನೀಡುತ್ತಿರಲಿಲ್ಲ. ಪೊಲೀಸ್ ಇಲಾಖೆ ಸಾರ್ವಜನಿಕರ, ಸಂಘ-ಸಂಸ್ಥೆಗಳ ಸಹಕಾರ ಪಡೆದು ಆಯಾಕಟ್ಟಿನಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅಪಘಾತಗಳನ್ನು ತಡೆಯಲು ವಿಶೇಷ ಪ್ರಯತ್ನ ನಡೆಸಿದೆ. ಅಲ್ಲದೆ ಸಂಜೆ ವೇಳೆಯಲ್ಲಿ ರಸ್ತೆಯಲ್ಲಿರುವ ಬ್ಯಾರಿಕೇಡ್‍ಗಳನ್ನು ಪೊಲೀಸ್ ಸಿಬ್ಬಂದಿಗಳೇ ರಸ್ತೆ ಬದಿಗೆ ಸರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಇದೀಗ ಮುಖ್ಯ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಗೋಣಿಕೊಪ್ಪ ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬ ಆರೋಪ ಇದೀಗ ದೂರವಾಗುತ್ತಿದೆ. ಏಕಮುಖ ಸಂಚಾರದಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಉಮಾ ಮಹೇಶ್ವರಿ ದೇವಸ್ಥಾನದ ಬಳಿಯ ಬೈಪಾಸ್‍ಗೆ ತೆರಳುವ ಜಂಕ್ಷನ್‍ನಲ್ಲಿ ಬೃಹತ್ ಗಾತ್ರದ ನಾಮಫಲಕ ಅಳವಡಿಸಿ ಭಾರೀ ಗಾತ್ರದ ವಾಹನ ಸಂಚರಿಸದಂತೆ ಎಚ್ಚರಿಕೆಯ ಸೂಚನಾ ಫಲಕವನ್ನು ಪೊಲೀಸರು ಅಳವಡಿಸಿದ್ದಾರೆ. ಪಟ್ಟಣದ ಮಸೀದಿ ರಸ್ತೆಯನ್ನು ಸಂಪೂರ್ಣವಾಗಿ ಏಕಮುಖ ಸಂಚಾರಕ್ಕೆ ಸೀಮಿತಗೊಳಿಸಿ ಸ್ಥಳದಲ್ಲಿಯೇ ಪ್ರತಿನಿತ್ಯ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಬೈಪಾಸ್ ರಸ್ತೆಯ ಬದಿಯಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಅಂಗಡಿಗಳ ಮುಂದೆ ವಾಹನ ನಿಲುಗಡೆಯಾಗುತ್ತಿರುವು ದನ್ನು ಮನಗಂಡ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಇಂತಹ ಅಂಗಡಿ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ರಸ್ತೆಯ ಬದಿಯಲ್ಲಿರುವ ಅಂಗಡಿಗಳನ್ನು ಹಿಂದಕ್ಕೆ ಸರಿಸುವಂತೆ ಸೂಚಿಸಿದ್ದಾರೆ. ವೀರಾಜಪೇಟೆಯಿಂದ ಬರುವ ನಾಲ್ಕು ಚಕ್ರ ವಾಹನಗಳು ಉಮಾಮಹೇಶ್ವರಿ ದೇವಸ್ಥಾನ ಸಮೀಪದ ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣ ತಲುಪುವ ವ್ಯವಸ್ಥೆ ಕಲ್ಪಿಸಿದ್ದರೂ ಈ ರಸ್ತೆಯಲ್ಲಿ ವಕ್ರ್ಸ್ ಶಾಪ್‍ಗೆ ಬರುವ ವಾಹನಗಳು ರಸ್ತೆಯನ್ನು ಅತಿಕ್ರಮಿಸಿ ಕೊಂಡಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ವೀರಾಜಪೇಟೆಗೆ ತೆರಳುವ ಬಸ್‍ಗಳಿಗೆ ಬಾಂಬೇ ಸ್ವೀಟ್ಸ್ ಸ್ಟಾಲ್ ಮುಂಭಾಗ ಎರಡು ನಿಮಿಷಕ್ಕೆ ಸೀಮಿತಗೊಳಿಸಿ ನಿಲುಗಡೆಗೆ ಈ ಹಿಂದೆ ಅವಕಾಶ ಕಲ್ಪಿಸಿದ್ದರು. ಆದರೆ, ಇದೀಗ ಹೆಚ್ಚಿನ ಸಮಯ ಬಸ್ ನಿಲುಗಡೆಯಾಗು ತ್ತಿರುವುದರಿಂದ ಈ ವ್ಯವಸ್ಥೆಯನ್ನು ಈ ಹಿಂದಿನಂತೆಯೇ ಮಾಡ ಬೇಕಾಗಿದೆ. ಆಟೋ ರಿಕ್ಷಾಗಳು ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿರುವುದ ರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳ ಬೇಕಾಗಿದೆ. ಬಸ್ ನಿಲ್ದಾಣದಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲು ನಿಯೋಜನೆಗೊಂಡ ಕೆಲವು ಪೊಲೀಸರು ಹಾಗೂ ಕೆಲವು ಹೋಂಗಾರ್ಡ್‍ಗಳು ರಸ್ತೆಯಲ್ಲಿ ವಾಹನ ದಟ್ಟಣೆಯಿದ್ದರೂ ತಮ್ಮ ಮೊಬೈಲ್‍ಗಳೊಂದಿಗೆ ಸಮೀಪದ ಅಂಗಡಿಯ ಮುಂಭಾಗ, ಹೊಟೇಲ್ ಕ್ಯಾಂಟೀನ್ ಮುಂಭಾಗ ಸಮಯ ಕಳೆಯುತ್ತಿದ್ದ ಆರೋಪವು ಇದ್ದು, ಕೆಲಸದ ಸಂದರ್ಭ ಮೊಬೈಲ್ ಬಳಸದಂತೆ ಅಧಿಕಾರಿ ಗಳು ಎಚ್ಚರಿಕೆ ನೀಡಬೇಕಾಗಿದೆ. ಸದಾ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸರ ಕಷ್ಟವನ್ನು ಅರಿತ ಅಧಿಕಾರಿಗಳು ನಗರದಲ್ಲಿ ಹಾಕ ಲಾಗಿದ್ದ ತಂಗುದಾಣವನ್ನು ಸ್ಥಳಾಂತರಿಸಿ ಇದನ್ನು ಉಮಾ ಮಹೇಶ್ವರಿ ಜಂಕ್ಷನ್‍ನಲ್ಲಿ ಪೊಲೀಸ್ ಚೌಕಿ ನಿರ್ಮಿಸಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೆರಳನ್ನು ಕಲ್ಪಿಸಿದ್ದಾರೆ. ಇದರಿಂದ ಕರ್ತವ್ಯ ದಲ್ಲಿರುವ ಪೊಲೀಸರು ಬಿಸಿಲಿನ ಬೇಗೆಯಿಂದ ಕೊಂಚ ಸುಧಾರಿಸಿ ಕೊಳ್ಳುವಂತಾಗಿದೆ.

- ಹೆಚ್.ಕೆ. ಜಗದೀಶ್