ಕೂಡಿಗೆ, ಫೆ. 22: ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಸವಾಲುಗಳನ್ನು ಎದುರಿಸಲು ಧೈರ್ಯದಿಂದ ಹಾಗೂ ಪ್ರೇರೇಪಣೆಯಿಂದ ಮುನ್ನುಗ್ಗಬೇಕು. ಅದರಂತೆಯೇ ಓದಿನಲ್ಲಿಯೂ ಬುದ್ಧಿ ಸಾಮಥ್ರ್ಯದಿಂದ ಅಂಕಗಳಿಸಲು ಸಾಧ್ಯ. ಬದುಕನ್ನು ಸರಳತೆಯಿಂದ ಮತ್ತು ಸಂತೋಷದಿಂದ ಸ್ವೀಕರಿಸಿ ತನ್ನಲ್ಲಿರುವ ಶಕ್ತಿಯನ್ನು, ಆಸಕ್ತಿಯನ್ನು ಪುನರ್ ರೂಪಿಸಿಕೊಂಡಲ್ಲಿ ಧೈರ್ಯದಿಂದ ಮುನ್ನುಗ್ಗಲು ಸಾಧ್ಯ ಎಂದು ಕಣಿವೆ ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ ಹೇಳಿದರು.

ಕೂಡಿಗೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಮೌಲ್ಯಗಳಿಗೆ ಶಿಕ್ಷಣವೇ ಮುಖ್ಯವಾಗಿರುತ್ತದೆ. ಅದನ್ನರಿತು ತನ್ನ ವಿದ್ಯಾಭ್ಯಾಸವನ್ನು ಶ್ರದ್ಧೆಯಿಂದ ಮುಂದುವರೆಸಿ ತಮ್ಮ ಗುರಿ ಸಾಧನೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ, ಕಾಲೇಜಿನ ಹಿರಿಯ ಉಪನ್ಯಾಸಕರಾದ ನಾಗಪ್ಪ, ಹನುಮರಾಜ್, ಸತೀಶ್, ರಮೇಶ್ ಸೇರಿದಂತೆ ಉಪನ್ಯಾಸಕ ವೃಂದ, ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.

ಈ ಸಂದರ್ಭ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.