ಪೊನ್ನಂಪೇಟೆ: ನಾಲ್ವರು ಅಪರಿಚಿತರು ಮಸೀದಿಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಈ ಪೈಕಿ ಒಬ್ಬಾತ ಮಸೀದಿಯಲ್ಲಿದ್ದ ಮುಸ್ಲಿಯಾರ್‍ರೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಿಗ್ಗೆ ಹಾತೂರಿನಲ್ಲಿ ನಡೆದಿದೆ.
ಮೂಲತ ಪಾಲಿಬೆಟ್ಟ ಸಮೀಪದ ಹುಂಡಿ ನಿವಾಸಿ ಮೂಸ ಎಂಬವರೇ ಅಪರಿಚಿತನೋರ್ವನಿಂದ ತೀವ್ರವಾಗಿ ಹಲ್ಲೆಗೊಳಗಾದ ಮುಸ್ಲಿಯಾರ್ ಆಗಿದ್ದಾರೆ.
ಹಲ್ಲೆಗೊಳಗಾದ ಮುಸ್ಲಿಯಾರ್ ಅವರು ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆರಂಭದಲ್ಲಿ ಗೋಣಿಕೊಪ್ಪಲು ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದರು. ಈ ಕಾರಣಕ್ಕೆ ಹಲ್ಲೆಗೊಳಗಾದವರಿಂದ ದೂರು ಸ್ವೀಕರಿಸಿದರೂ ಕೇವಲ ಎನ್. ಸಿ ಆರ್. ಪ್ರತಿಯನ್ನು ಮಾತ್ರ ನೀಡಿ ದೂರುದಾರರನ್ನು ವಾಪಸ್ಸು ಕಳಿಸಿದ್ದರು. ಮಧ್ಯಾಹ್ನದ ನಂತರ ಘಟನೆಯ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ಮತ್ತೆ ದೂರುದಾರರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಎನ್.ಸಿ.ಆರ್. ವಾಪಸ್ ಪಡೆದು ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಹಿನ್ನೆಲೆ ಗೋಣಿಕೊಪ್ಪಲು-ವೀರಾಜಪೇಟೆ ಮುಖ್ಯರಸ್ತೆಯಲ್ಲಿರುವ ಹಾತೂರು ಮೋಹಿದ್ದೀನ್ ಜುಮಾ ಮಸೀದಿಯು ಇತರ ಎಲ್ಲಾ ಮಸೀದಿಗಳಂತೆ ಮುಸ್ಲಿಮರ ನಮಾಜ್ ಕಾರ್ಯನಿರ್ವಹಣೆಗಾಗಿ ಬೆಳಗಿನ ಜಾವದಿಂದ ರಾತ್ರಿವರೆಗೆ ಸದಾ ಮುಕ್ತವಾಗಿರುತ್ತವೆ.
ಇದರಂತೆ ಶನಿವಾರ ಬೆಳಗಿನ ಜಾವ 4.15 ಗಂಟೆಗೆ ಕೇರಳ ರಾಜ್ಯ ನೊಂದಣಿಯ (ಕೆಎಲ್ 14 ಜಿ 1828) ಇನ್ನೋವಾ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮಸೀದಿಯ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ್ದಾರೆ. ಈ ವೇಳೆ ಎಚ್ಚರಗೊಂಡ ಮಸೀದಿಯಲ್ಲಿದ್ದ ಮೂಸಾ ಮುಸ್ಲಿಯಾರ್ ಅವರು ಹೊರಬಂದು ನೋಡಿದಾಗ ಕಾಂಪೌಂಡ್ ಹಾರಿ ಬಂದ ನಾಲ್ವರು, ಮಸೀದಿಯ ಒಳಪ್ರವೇಶಿಸಿದ್ದು ಕಂಡುಬಂದಿದೆ. ಇದನ್ನು ಆಕ್ಷೇಪಿಸಿದ ಮೂಸ ಮುಸ್ಲಿಯಾರ್ ಅವರು ಮಸೀದಿಯೊಳಗೆ ಕಾಂಪೌಂಡ್ ಹಾರಿ ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಹಾರಿಕೆಯ ಉತ್ತರ ನೀಡಿದ ಅಪರಿಚಿತರು, ಬೆಳಗಿನ ನಮಾಜ್ ನಿರ್ವಹಣೆಗಾಗಿ ಬಂದಿರುವುದಾಗಿ ತಿಳಿಸಿದ್ದರಿಂದ ಮೂಸ ಮುಸ್ಲಿಯಾರ್ ಸುಮ್ಮನಾದರು ಎನ್ನಲಾಗಿದೆ.
ಬೆಳಿಗ್ಗೆ 5:15 ಗಂಟೆಗೆ ಎಂದಿನಂತೆ ಸುಬ್ ಹಿ ನಮಾಜಿನ ಅಜಾನ್ ಮೊಳಗಿದ ಸಂದರ್ಭದಲ್ಲಿ ಮಸೀದಿಯಲ್ಲಿ ಮಲಗಿದ್ದ ನಾಲ್ವರ ಪೈಕಿ ಇಬ್ಬರು ವ್ಯಕ್ತಿಗಳು ನಿದ್ರೆಯಿಂದ ಎದ್ದು ಹೊರಭಾಗದಲ್ಲಿ ನಿಂತಿದ್ದ ಕಾರಿಗೆ ತೆರಳಿದರು. ಉಳಿದಿಬ್ಬರು ಸುಬಹಿ ನಮಾಜ್ ಮಾಡಿದ್ದರು ಎನ್ನಲಾಗಿದೆ.
ನಮಾಜಿನ ನಂತರ ಇಬ್ಬರು ಅಪರಿಚಿತರು ಮತ್ತೆ ಮಸೀದಿಯೊಳಗೆ ಮಲಗಿದ್ದಾರೆ. ಬೆಳಿಗ್ಗೆ 8.30 ಗಂಟೆಯಾಗುತ್ತಿದ್ದಂತೆ ನಿದ್ರೆಯಿಂದ ಎದ್ದ ಇಬ್ಬರು ಅಪರಿಚಿತರು ಮುಸ್ಲಿಯಾರ್‍ರೊಂದಿಗೆ ಅನಗತ್ಯ ವಿಚಾರಕ್ಕೆ ಜಗಳ ಆರಂಭಿಸಿದಾಗ ಮಾತಿಗೆ ಮಾತು ಬೆಳೆದ ಕಾರಣ ಈ ಪೈಕಿ ತಂಡದಲ್ಲಿದ್ದ ಒಬ್ಬಾತ ಮೂಸ ಮುಸ್ಲಿಯಾರ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ನಂತರವೂ ಈ ನಾಲ್ವರು ಕಾರಿನ ಬಳಿಯೇ ಇದ್ದರು ಎನ್ನಲಾಗಿದೆ.
ಈ ವಿಷಯ ತಿಳಿದು ಸಮೀಪದಲ್ಲೇ ಇದ್ದ ಹಾತೂರು ಮಸೀದಿಯ ಅಧ್ಯಕ್ಷರಾದ ಎ.ಎಂ.ಹಂಸ ಅವರು ಸ್ಥಳಕ್ಕೆ ಬರುವಷ್ಟರಲ್ಲಿ ನಾಲ್ವರು ಅಪರಿಚಿತರು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಕಾರಿನ ನೋಂದಣಿ ಸಂಖ್ಯೆಯನ್ನು ಹಲ್ಲೆಗೊಳಗಾದ ಮುಸ್ಲಿಯಾರ್ ಅವರು ಗಮನಿಸಿದ್ದು, ಈ ವಿಷಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕ್ರಮಕ್ಕೆ ಒತ್ತಾಯ : ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರು, ಆರೋಪಿಗಳು ಎಲ್ಲಿಯವರೇ ಆಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಾಗಿದೆ- ರಾಮರೆಡ್ಡಿ : ಶನಿವಾರ ಬೆಳಿಗ್ಗೆ ಹಾತೂರು ಜುಮಾ ಮಸೀದಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತರ ವಿರುದ್ಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ‘ಶಕ್ತಿ'ಯೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ 8.30 ರವರೆಗೆ ಅಪರಿಚಿತರ ಕಾರು ಮಸೀದಿ ಬಳಿಯೇ ಇತ್ತು ಎಂದು ದೂರುದಾರರು ಹೇಳುತ್ತಿದ್ದಾರೆ. ಈ ಘಟನೆಯ ಕುರಿತು ಅ ಸಮಯದಲ್ಲೇ ಪೊಲೀಸರಿಗೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರೆ ಆರೋಪಿಗಳನ್ನು ಪತ್ತೆಹಚ್ಚುವುದು ಸುಲಭವಿತ್ತು ಎಂದಿದ್ದಾರೆ. ಈ ಬಗ್ಗೆ ತನಿಖೆ ಚುರುಕುಗೊಳಿಸಲಾಗುವುದು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
-ರಫೀಕ್