ಸೋಮವಾರಪೇಟೆ, ಫೆ. 20: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಶ್ರಮದಾನ ನಡೆಸಿದರು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಸ್ಥಳ ಸ್ವಸಹಾಯ ಸಂಘಗಳ ಸದಸ್ಯರುಗಳು ದೇವಾಲಯದ ಆವರಣವನ್ನು ಶುಚಿಗೊಳಿಸಿದರು. ಇದೇ ಸಂದರ್ಭ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಅರಸಿನಕುಪ್ಪೆ ಮಂಜುನಾಥ ಸನ್ನಿಧಿಗೆ ನೀಡಲಾದ 2 ಕಸ ಸಂಗ್ರಹದ ಬುಟ್ಟಿಯನ್ನು ದೇವಾಲಯಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ದೇವಾಲಯದ ಪ್ರಧಾನ ಗುರು ಶ್ರೀರಾಜೇಶ್‍ನಾಥ್‍ಜೀ ಅವರು, ದೇವಾಲಯದ ಸ್ವಚ್ಛತೆಯೊಂದಿಗೆ ಇಡೀ ಗ್ರಾಮಗಳೂ ಸ್ವಚ್ಛವಾಗಿರುವಂತೆ ಪ್ರತಿಯೋರ್ವರೂ ನೋಡಿಕೊಳ್ಳಬೇಕು. ಪರಿಸರದ ರಕ್ಷಣೆ ಇಂದಿನ ಅನಿವಾರ್ಯತೆಯಾಗಿದ್ದು, ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಯೋಜನೆಯ ಮೇಲ್ವಿಚಾರಕ ಗುರುಪ್ರಸಾದ್, ತೊರೆನೂರು ಗ್ರಾ.ಪಂ. ಸದಸ್ಯ ರವಿಕುಮಾರ್, ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಇತರರು ಈ ಸಂದರ್ಭ ಹಾಜರಿದ್ದರು.