ನಾಪೆÇೀಕ್ಲು, ಫೆ. 20: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಮುದಾಯ ಆಧಾರಿತ ಅರಿವು ಕುರಿತ ವಿಶೇಷ ಗ್ರಾಮಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯಿತಿಯ ನೀರು ಮತ್ತು ನೈರ್ಮಲ್ಯ ಸಮಿತಿ ಸಂಯೋಜಕ ಚೇತನ್ ಅಂತರ್ಜಲದ ಮಟ್ಟ ಕುಸಿಯುತ್ತಿದ್ದು, ನೀರನ್ನು ಮಿತವಾಗಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಜೀವಜಲ ಮಾನವನ ಬದುಕಿಗೆ ಅತ್ಯಗತ್ಯವಾದ ಸಂಪನ್ಮೂಲವಾಗಿದೆ. ಅದನ್ನು ವಿವೇಚನೆಯಿಂದ ಬಳಸಬೇಕು. ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಮನೆ, ಕುಟುಂಬ, ಸಮಾಜ ಊರು ಕೇರಿ ಸೇರಿದಂತೆ ಎಲ್ಲೆಡೆ ಸಿಗುವ ತ್ಯಾಜ್ಯಗಳನ್ನು ಹಸಿಕಸ, ಒಣಕಸ ಎಂದು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಬದ್ದಂಜೆಟ್ಟಿರ ದೇವಿ ದೇವಯ್ಯ, ಚಂಗೇಟಿರ ಕುಮಾರ್ ಸೋಮಣ್ಣ, ಬೈರುಡ ಮುತ್ತಪ್ಪ, ಪಾಪು, ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀಧರ್ ಸ್ವಾಗತಿಸಿ ವಂದಿಸಿದರು.