ವೀರಾಜಪೇಟೆ, ಫೆ. 19: ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಕಾನೂನುಬದ್ಧವಾಗಿ ರೂಪಿಸಲಾಗಿದ್ದರೂ ಸರ್ಕಾರ ಅದನ್ನು ಜಾರಿಗೆ ತರದೆ ನಿರ್ಲಕ್ಷಿಸುತ್ತಿದೆ ಆದ್ದರಿಂದ ಕಾರ್ಮಿಕರು ಒಮ್ಮತದಿಂದ ಸಂಘಟನೆಗಳ ಮೂಲಕ ಸೌಲಭ್ಯ ಗಳಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ. ರೂಜಾರಿಯೊ ಹೇಳಿದರು.

ಎ.ಐ.ಸಿ.ಸಿ.ಟಿ.ಯು ಆಲ್ ಇಂಡಿಯಾ ಸೆಂಟರ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ವತಿಯಿಂದ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕಾರ್ಮಿಕರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಲಿಪ್ಟನ್ ರೋಜಾರಿಯೊ ಅವರು ಎಲ್ಲಾ ಕಾರ್ಮಿಕರುಗಳು ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು. ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮತ್ತು ಕಾಫಿ ಪ್ಲಾಂಟೇಷನ್ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿಪಡಿಸಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಎಐಸಿಸಿಟಿಯುನ ರಾಜ್ಯ ಕಾರ್ಯದರ್ಶಿ ಕಾಂ. ಅಪ್ಪಣ್ಣ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯದೆ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವಂತಾಗಬೇಕು. ಲೈನ್‍ಮನೆಯಲ್ಲಿ ವಾಸವಿರುವ ಕಾರ್ಮಿಕರನ್ನು ಗುರುತಿಸಿ ಸರ್ಕಾರ ಅವರಿಗೆ ಮನೆ ನಿವೇಶನ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಮುಖಂಡ ಎಂ.ಕೆ. ಮೋಹನ್ ವಹಿಸಿ ಮಾತನಾಡಿದರು. ಸಂಘಟನೆಯ ಕೋಲಾರ ಜಿಲ್ಲಾಧ್ಯಕ್ಷ ಪ್ರಭು ಮಾತನಾಡಿ, ನಮ್ಮ ಬೇಡಿಕೆಗಳಿಗಾಗಿ ಸಂಘಟನೆಯ ಮೂಲಕ ಹೋರಾಟ ಅನಿವಾರ್ಯ ಎಂದರು. ಸಭೆಯ ನಂತರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಬೇಡಿಕೆಗಳನ್ನು ಮುಂದಿಡಲಾಯಿತು. ಇದೇ ಸಮ್ಮೇಳನದಲ್ಲಿ ಕಾರ್ಮಿಕರ ಪರವಾದ ಏಳು ನಿರ್ಣಯಗಳನ್ನು ಅಂಗೀಕರಿಸಿ ಸರಕಾರಕ್ಕೆ ಕಳಿಸಿಕೊಡಲು ತೀರ್ಮಾನಿಸಲಾಯಿತು. ಸಮ್ಮೇಳನ ದಲ್ಲಿ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು, ಕಾನೂರು, ಮಾಯಮುಡಿ ಹಾಗೂ ಇತರೆಡೆಗಳಿಂದ ಕಾರ್ಮಿಕರುಗಳು ಭಾಗವಹಿಸಿದ್ದರು.