ಮಡಿಕೇರಿ, ಫೆ. 20: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಪಟ್ಟಣಗಳಲ್ಲಿ ಮಳೆಗಾಲಕ್ಕೆ ಮೊದಲು ಅಭಿವೃದ್ಧಿ ಕೆಲಸಗಳನ್ನು ಪೂರೈಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇಂದು ನಗರದಲ್ಲಿ ಈ ಸಂಬಂಧ ಮಡಿಕೇರಿ ನಗರಸಭೆ ಹಾಗೂ ಇತರ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿದ ಅವರು; ಆಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಅನುಪಾಲನಾ ವರದಿ ಪಡೆದುಕೊಂಡರು.
ಈ ವೇಳೆ ಸರಕಾರದಿಂದ ಲಭ್ಯವಿರುವ ಅನುದಾನ ಹಾಗೂ ಪ್ರಗತಿಯಲ್ಲಿರುವ ಕೆಲಸಗಳ ವಿವರ ಪಡೆದ ಅವರು; ಕಾಮಗಾರಿಯ ಗುಣಮಟ್ಟದೊಂದಿಗೆ; ಆದಷ್ಟು ಶೀಘ್ರದಲ್ಲಿ ಕೆಲಸಗಳನ್ನು ಪೂರೈಸುವಂತೆ ಸಂಬಂಧಿಸಿದ ಇಂಜಿನಿಯರ್‍ಗಳಿಗೆ ತಾಕೀತು ಮಾಡಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲಸಗಳು ನಿರೀಕ್ಷೆಯಂತೆ ಆಗಿಲ್ಲ ಎಂಬ ಬಗ್ಗೆ ಅಸಮಾಧಾನ ಹೊರಗೆಡವಿದ ಅವರು; ಆಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಪಾಲಿನ ಕರ್ತವ್ಯವನ್ನು ಸರಿಯಾಗಿ ಮಾಡುವಂತೆ ತಿಳಿಹೇಳಿದರು.
ಮಡಿಕೇರಿ ನಗರದಲ್ಲಿ ಒಳಚರಂಡಿ ಹಾಗೂ ಇತರ ಕೆಲಸಗಳನ್ನು ಸಮರ್ಪಕ ರೀತಿ ನಿರ್ವಹಿಸಬೇಕೆಂದು ಆಯುಕ್ತರಿಗೆ ಸೂಚಿಸಿದ ಅವರು; ನೂತನ ಬಸ್‍ನಿಲ್ದಾಣದಿಂದ ಕೈಗಾರಿಕಾ ಬಡಾವಣೆಗಾಗಿ ಒಳಚರಂಡಿ ಕಾಮಗಾರಿಯನ್ನು ಮರು ಪರಿಶೀಲಿಸಿ; ಆ ಬಳಿಕ ಅಗತ್ಯ ಅನುಸಾರ ಕೈಗೊಳ್ಳಬೇಕೆಂದು ನೆನಪಿಸಿದ ಅವರು; ಸದ್ಯಕ್ಕೆ ಈ ಕೆಲಸ ಕೈಗೊಳ್ಳದಂತೆ ಸಂಬಂಧಪಟ್ಟವರಿಗೆ ತಾಕೀತು ಮಾಡಿದರು.