*ಸಿದ್ದಾಪುರ, ಫೆ. 20: ಕಳೆದ ವರ್ಷ ಸುರಿದ ಮಹಾಮಳೆಯ ಸಂದರ್ಭ ಮನೆಗಳನ್ನು ಕಳೆದುಕೊಂಡ ಕರಡಿಗೋಡು ಮತ್ತು ಗುಹ್ಯ ಗ್ರಾಮದ ಹೊಳೆಬದಿ ನಿವಾಸಿಗಳು ಇತ್ತೀಚಿಗೆ ಸಿದ್ದಾಪುರ ಗ್ರಾ.ಪಂ ಎದುರು ನಡೆಸಿದ ಅಹೋರಾತ್ರಿ ಪ್ರತಿಭಟನೆಯ ಸದ್ದು ಇಂದು ವಿಧಾನಸಭಾ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ.
ವಿರೋಧ ಪಕ್ಷದ ನಾಯಕರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮಳೆಹಾನಿ ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ಮಳೆಹಾನಿ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನೆ ನಡೆಸುವಂತಹ ದುಸ್ಥಿತಿ ಬಂದೊದಗಿದೆ. ಪರಿಹಾರ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ಹಿಂಜರಿಕೆ: ಈ ನಡುವೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಭರವಸೆ ಹಿನ್ನೆಲೆ ಅಹೋರಾತ್ರಿ ಪ್ರತಿಭಟನೆಯಿಂದ ಹಿಂದೆ ಸರಿದಿರುವ ಸಂತ್ರಸ್ತರು ಇದೀಗ ಜಿಲ್ಲಾಡಳಿತ ಗುರುತಿಸಿರುವ ಪರ್ಯಾಯ ಜಾಗಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಟ್ಟಂಗಾಲದ ಬಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಏಳು ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಪ್ರತಿಭಟನಾ ನಿರತ ಸಂತ್ರಸ್ತರು ಅಲ್ಲಿಗೆ ತೆರಳಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಕರಡಿಗೋಡು ಮತ್ತು ಗುಹ್ಯ ಗ್ರಾಮ ವ್ಯಾಪ್ತಿಯಲ್ಲಿ ಹೊಳೆಬದಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರು ಇದೀಗ ದೂರದ ಪ್ರದೇಶವಾದ ಬಿ.ಶೆಟ್ಟಿಗೇರಿಗೆ ಹೋಗುವುದಾದರು ಹೇಗೆ ಎಂದು ಚಿಂತಿತರಾಗಿದ್ದಾರೆ.
ನಮ್ಮನ್ನು ಅಹೋರಾತ್ರಿ ಪ್ರತಿಭಟನೆ ನಡೆಸುವಂತೆ ನೇತೃತ್ವ ವಹಿಸಿ ಪ್ರಚೋದನೆ ನೀಡಿದವರಿಂದಲೇ ಇದೀಗ ನಮಗೆ ದೂರದ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಅವರು, ಭೇಟಿ ನೀಡಿ ಸ್ವಲ್ಪ ಕಾಲವಕಾಶ ನೀಡಿದರೆ ಸೂಕ್ತ ಜಾಗ ಗುರುತಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇದೇ ಸಂದರ್ಭ ಜೊತೆಯಲ್ಲಿದ್ದ ಸ್ಥಾನೀಯ ಬಿಜೆಪಿ ಅಧ್ಯಕ್ಷ ಹಾಗೂ ಬೆಳೆಗಾರ ಕುಕ್ಕನೂರು ನಾಣಯ್ಯ ಅವರು ಮಾಲ್ದಾರೆ ಬಳಿಯ ಆಸ್ಥಾನ ಎಂಬಲ್ಲಿ ಇರುವ ತಮಗೆ ಸೇರಿದ 12 ಎಕರೆ ಭೂಮಿಯನ್ನು ಕೇವಲ ಸರ್ಕಾರಿ ದರದಲ್ಲೇ ಸರ್ಕಾರದ ವಶಕ್ಕೆ ನೀಡಿ ಸಂತ್ರಸ್ತರಿಗೆ ಹಂಚಿಕೆ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಅದು ಕಾಡಾನೆ ಉಪಟಳದ ಪ್ರದೇಶವೆಂದು ಆತಂಕಗೊಂಡು ಪ್ರತಿಭಟನಾಕಾರರು ಅಲ್ಲಿಗೆ ತೆರಳಲು ನಿರಾಕರಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳು ಬಿ.ಶೆಟ್ಟಿಗೇರಿಯಲ್ಲಿ ಗುರುತಿಸಿರುವ ಏಳು ಎಕರೆ ಪ್ರದೇಶಕ್ಕೆ ಸಂತ್ರಸ್ತರು ಸ್ಥಳಾಂತರಗೊಳ್ಳಬೇಕೆಂದು ಆದೇಶಿಸಿರುವುದರಿಂದ ಪ್ರತಿಭಟನೆಯ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದ್ದವರು, ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.